

ಮಡಿಕೇರಿ: ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಪತ್ರಕರ್ತರ ಹರಿತವಾದ ಲೇಖನಿಗಿದೆ. ಪತ್ರಕರ್ತರು ಸತ್ಯನಿಷ್ಠ ವರದಿಗಳನ್ನು ಪ್ರಕಟಿಸುವಾಗ ಯಾವುದೇ ಹಿಂಜರಿಕೆ ಇರಬಾರದು ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದರು.
ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ನಡೆದ ಕೊಡಗು ಪತ್ರಕರ್ತರ ಸಂಘ(ರಿ)ದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮತ್ತು ಪತ್ರಕರ್ತರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ನ್ಯಾಯಾಂಗದ ತೀರ್ಪಿನ ಬಗ್ಗೆ ವಿಶ್ಲೇಷಣಾತ್ಮಕವಾಗಿ ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆ ಸದಾ ಇರುತ್ತದೆ. ಹೀಗಾಗಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಂದಿಗೂ ಧಕ್ಕೆಯಾಗುವುದಿಲ್ಲ. ಹೀಗಿದ್ದರೂ ಇಂದಿನ ದಿನಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗುತ್ತಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಕೊಡಗಿನ ಪತ್ರಕರ್ತರು ಗಮನಹರಿಸುವಂತೆ ಸಲಹೆ ನೀಡಿದರು.
ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪತ್ರಕರ್ತರು ಚಿಂತನಾಶೀಲ ಬರವಣಿಗೆಯ ಕಡೆ ಹೆಚ್ಚಿನ ಆದ್ಯತೆ ನೀಡಬೇಕು. ಹಿರಿಯರ ಗರಡಿಯಲ್ಲಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು. ನಿಖರತೆ ಇದ್ದರೆ ಯಾವ ವಿಚಾರದಲ್ಲೂ ಎದರುವಂತಿಲ್ಲ. ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು ಪತ್ರಕರ್ತರ ಸಂಘ ಬಲಿಷ್ಠವಾಗಬೇಕಾದರೆ ಸಂಘದ ಸಾರಥಿ ಗಟ್ಟಿಯಾಗಿರಬೇಕು ಎಂದ ಅವರು, ಸಂಘದಲ್ಲಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಇದೇ ಸಂದರ್ಭ ಘೋಷಿಸಿದರು.
ಕೂರ್ಗ್ ಹೋಟೇಲ್ಸ್, ರೆಸಾರ್ಟ್ ಅಸೋಸಿಯೇ?ನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಸಂಘದ ವಾಹನ ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಕಾಳಜಿಯಿಂದ ಪತ್ರಿಕಾರಂಗ ನಡೆಯುತ್ತಿದೆ. ಬೇರೆ ಜಿಲ್ಲೆಗೆ ಹೋಳಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರು ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಪತ್ರಕರ್ತರ ಸಂಘಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಇದೇ ಸಂದರ್ಭ ಭರವಸೆ ನೀಡಿದರು.
ಕೊಡಗು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹೆಚ್.ಟಿ.ಅನಿಲ್ ಕೊಡಗಿನ ಪತ್ರಿಕಾ ಕ್ಷೇತ್ರದ ಭೀಷ್ಮ ಶಕ್ತಿ ಪತ್ರಿಕೆಯ ಸ್ಥಾಪಕರಾದ ಬಿ.ಎಸ್.ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಪದಗ್ರಹಣ ಸ್ವೀಕರಿಸಿದರು.
ಸಂಘದ ಗೌರವ ಸಲಹೆಗಾರ ಟಿ.ಪಿ.ರಮೇಶ್, ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ.ಮುರುಳೀಧರ್, ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತಶಯನ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ವದಾಖಲೆ ಮಾಡಿರುವ ಮದೆನಾಡಿನ ಸಿಂಚನಾ, ದೆಹಲಿಯಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಕೊಡಗನ್ನು ಪ್ರತಿನಿಧಿಸಿದ್ದ ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಹೆಸರಾಂತ ಜಾದು ಗಾರ ವಿಕ್ರಂ ಜಾದೂಗಾರ್ ಹಾಗೂ ಕೊಡಗು ಪತ್ರತರ್ಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ.ಮುರುಳೀಧರ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉಜ್ವಲ್ ರಂಜಿತ್, ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮತ್ತಿತರರು ಪಾಲ್ಗೊಂಡಿದ್ದರು. ವಿಶ್ವದಾಖಲೆ ಮಾಡಿರುವ ಮದೆನಾಡಿನ ಸಿಂಚನಾ ಅವರಿಂದ ಯೋಗ ಪ್ರದರ್ಶನ, ವಿಕ್ರಂ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ ಜನ ಮನ ಸೆಳೆಯಿತು.