ಪತ್ರಕರ್ತರೇ ನಿಜವಾದ ಸಂಶೋಧಕರು

mnd Upanyasa
Published on

ಮುಂಡಗೋಡ: ಸಮಾಜದಲ್ಲಿ ನಡೆಯುವ ಶೋಷಣೆ ಹಾಗೂ ಕುಂದುಕೊರತೆಗಳನ್ನು ಆಲಿಸಿ ಬಯಲಿಗೆಳೆದು ನ್ಯಾಯ ಒದಗಿಸಿಕೊಡುವ ಪತ್ರಕರ್ತರೇ ನಿಜವಾದ ಸಂಶೋಧಕರು ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಮಂಜಣ್ಣ ಜಂಗವಾಡ ಹೇಳಿದರು.

ಪಟ್ಟಣದ ನಿವೃತ್ತ ಸರ್ಕಾರಿ ನೌಕರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಪ್ರಯಕ್ತ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ನೊಂದವರಿಗೆ ನೆರವು ದೊರಕಿಸಿಕೊಡುವಲ್ಲಿ ಪತ್ರಿಕಾರಂಗ ತೀವ್ರ ಪರಿಣಾಮಕಾರಿಯಾಗಿದೆ. ಎಷ್ಟೇ ಡಿಜಿಟಲ್ ಮೀಡಿಯಾ ಬಂದರೂ ಕೂಡ ಯಾರು ಓದಿ ಜ್ಞಾನ ಸಂಪಾದನೆ ಮಾಡುತ್ತಾರೆ ಅದೇ ಶಾಶ್ವತವಾಗಿ ನೆಲೆಸುವ ಜ್ಞಾನವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ ಮಾತನಾಡಿ, ಖಡ್ಗಕ್ಕಿಂತ ಲೇಖನ ಹರಿತ ಎಂಬುವುದಕ್ಕೆ ಪತ್ರಿಕಾ ರಂಗ ಮಾಡಿದ ಕ್ರಾಂತಿಯೇ ಸಾಕ್ಷಿ. ಖಡ್ಗ ಹಿಂಸೆಯನ್ನು ಪ್ರತಿಪಾದಿಸಿದರೆ ಲೇಖನಿ ಸತ್ಯವನ್ನು ಪ್ರತಿಪಾದಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ಎಸ್.ಡಿ. ಮುಡೆಣ್ಣವರ, ನಂದಾ ನರಗುಂದ, ಡಾ. ಪಿ.ಪಿ. ಛಬ್ಬಿ, ಎಸ್.ಬಿ. ಹೂಗಾರ, ನಾಗರಾಜ ಅರ್ಕಸಾಲಿ, ಸುಭಾಸ ಡೋರಿ, ರಮೇಶ ಅಂಬಿಗೇರ, ಚಮನಸಾಬ್ ಸುರಕೋಡ, ಶ್ರೀಕಾಂತ ಹೊಂಡದಕಟ್ಟಿ, ಸುಭಾಸ ವಡ್ಡರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net