

ಹರಿಹರ: ಸಾಮಾಜಿಕ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದುವ, ನಿಯಮ ಮತ್ತು ನಿಯಂತ್ರಣಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ ಎಂದು ದಾವಣಗೆರೆ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಕಣಸೋಗಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಐಕ್ಯೂಎಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕೋದ್ಯಮದ ವೃತ್ತಿ ಕೌಶಲ ಮತ್ತು ಸಂಹಿತೆ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪತ್ರಕರ್ತರಿಗೆ ಕರ್ತವ್ಯ ಪ್ರಜ್ಞೆ, ಸಾಮಾಜಿಕ ಹಿತ ಕಾಪಾಡುವ ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳು ಮಾತನಾಡುವ ಮತ್ತು ಬರೆಯುವ ಕೌಶಲ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಬಹುದು ಎಂದು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ಟಿ.ಇನಾಯತ್ ಉಲ್ಲಾ ಮಾತನಾಡಿ, ನಿತ್ಯದ ವೇದಿಕೆ ಕಾರ್ಯಕ್ರಮಗಳ ಸುದ್ದಿ ಜತೆ ಸಾಮಾಜಿಕ ಸಮಸ್ಯೆ ಗುರುತಿಸಿ ವಿಶೇಷ ವರದಿ ಮಾಡುವ ಮೂಲಕ ಸರ್ಕಾರ ಎಚ್ಚರಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕಾಗುತ್ತದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿರಲು ನಿಷ್ಠೆಯಿಂದ ಕರ್ತವ್ಯ ಮಾಡಬೇಕಾಗುತ್ತದೆ. ಸುದ್ದಿ ಗ್ರಹಿಸುವ ಗುಣ ಮತ್ತು ಅದರ ಮೂಲ ಕಾಪಾಡಿಕೊಳ್ಳುವ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಮನದಟ್ಟು ಮಾಡಿದರು.
ಪ್ರಾಚಾರ್ಯ ಪ್ರೊ. ಎಚ್.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸ್‌ಸಿ ಸಂಯೋಜಕ ಪ್ರೊ.ಜಿ.ಎಸ್.ಸುರೇಶ ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಯತೀಶ್ ಎಲ್.ಕೋಡಾವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವೀತಿಯ ಪದವಿ ವಿದ್ಯಾರ್ಥಿನಿ ಬಿ.ಎಚ್.ದೀಕ್ಷಿತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಬಿ.ಆರ್.ಅರ್ಪಿತಾ ನಿರೂಪಿಸಿದರು. ಉಪನ್ಯಾಸಕ ಸಿ.ಹುಚ್ಚಂಗಿ ವಂದಿಸಿದರು.