ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಪತ್ರಕರ್ತನಿಗೆ 10 ವರ್ಷ ಜೈಲು ಶಿಕ್ಷೆ

udp-2-chandra hemmadi
Published on

ಉಡುಪಿ: ನಾಲ್ಕು ವರ್ಷದ ಹಿಂದೆ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಂಧಿತನಾಗಿರುವ ಕುಂದಾಪುರದ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ(40)ಗೆ ಉಡುಪಿ ಜಿಲ್ಲಾ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಶುಕ್ರವಾರ ಎರಡು ಪ್ರಕರಣಗಳ ತೀರ್ಪು ನೀಡಿದ್ದು , 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2018ರ ಜೂನ್ ತಿಂಗಳಲ್ಲಿ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷ ಪ್ರಾಯದ ಬಾಲಕನನ್ನು ಜಲಪಾತದ ಫೋಟೋ ತೆಗೆಯಲು ಇದೆ ಎಂದು ಹೇಳಿ ಕಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಒಟ್ಟು 21 ಸಾಕ್ಷಿಗಳ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕ ಮತ್ತು ಸಾಂದರ್ಭಿಕ ಸಾಕ್ಷಗಳ ಆಧಾರದಲ್ಲಿ ಆರೋಪಿಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 10 ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಮೂರು ವರ್ಷ ಕಠಿಣ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಲಾಗಿದೆ.

21 ಪ್ರಕರಣ ದಾಖಲು
ಸುದ್ದಿಗಾಗಿ ದಾರಿ ತೋರಿಸುವ ನೆಪದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದ ಈತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆರೋಪಿ ವಿರುದ್ಧ ಒಟ್ಟು 21 ಬಾಲಕರು ದೂರು ನೀಡಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪೋಕ್ಸೊ ಪ್ರಕರಣ ದಾಖಲಾಗಿವೆ. ಚಂದ್ರ ಹೆಮ್ಮಾಡಿ ವಿರುದ್ಧ ದಾಖಲಾದ ಒಟ್ಟು 21 ಪೋಕ್ಸೊ ಪ್ರಕರಣಗಳಲ್ಲಿ ಈವರೆಗೆ 11 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಂಟು ಪ್ರಕರಣಗಳಲ್ಲಿ ಆರೋಪಿ ಸಾಕ್ಷಗಳ ಕೊರತೆಯಿಂದ ಖುಲಾಸೆಗೊಂಡಿದ್ದು, ಉಳಿದ ಎರಡು ಪ್ರಕರಣಗಳ ತೀರ್ಪು ಶನಿವಾರ ಪ್ರಕಟವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net