

ಬಾಗಲಕೋಟೆ: ತೀವ್ರ ಹೃದಯಾಘಾತದಿಂದ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ವಿಜಯವಾಣಿ ಬಿಡಿ ವರದಿಗಾರ ಪ್ರಕಾಶ ಗುಳೇದಗುಡ್ಡ (41) ಶುಕ್ರವಾರ ಬೆಳಗ್ಗೆ ನಿಧನರಾದರು.
ಆರೋಗ್ಯವಾಗಿಯೇ ಇದ್ದ ಪ್ರಕಾಶ, ಶುಕ್ರವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರ ಬಳಿ ತಪಾಸಣೆ ಮಾಡಿದಾಗ ಬಾಗಲಕೋಟೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಸೂಚಿಸಿದ್ದು, ತಕ್ಷಣವೇ ಅವರು ಕಾರು ಮಾಡಿಕೊಂಡು ಬಾಗಲಕೋಟೆ ಆಸ್ಪತ್ರೆಗೆ ಬರುವಾಗಲೇ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಮಾರ್ಗಮಧ್ಯದಲ್ಲಿ ಇರುವಾಗ ಆಸ್ಪತ್ರೆಗೆ ಬರುತ್ತಿರುವುದಾಗಿ ನಗರದ ಮಾಧ್ಯಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅದಾದ ಐದು ನಿಮಿಷದಲ್ಲಿ ಜೀವ ಬಿಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳು ಸೇರಿ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.
ಸೆ. 5 ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆಯಷ್ಟೆ ಪ್ರಕಾಶ ಗುಳೇದಗುಡ್ಡ ಅವರು ತಮಗೆ ಕಲಿಸಿದ್ದ ಮೃತ ಶಿಕ್ಷಕರ ಫೋಟೋ ಹಾಕಿ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿದ್ದರು. ನಿಧನರಾಗಿದ್ದ ಕೆಲ ಶಿಕ್ಷಕರ ಫೋಟೋ ಹಾಕಿ, ಅಗಲಿದ ಜೀವವಗಳು ಸದಾ ನಮ್ಮೊಂದಿಗೆ ಎಂದು ಸ್ಟೇಟಸ್ ಹಾಕಿದ್ದ ಪ್ರಕಾಶ ಗುಳೇದಗುಡ್ಡ ಕೆಲವೇ ಗಂಟೆಗಳಲ್ಲಿ ಎಲ್ಲರನ್ನು ಅಗಲಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪ್ರಕಾಶ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ. ಶುಕ್ರವಾರ ಸಂಜೆ ಕಮತಗಿ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಿತು.