ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ಅಗತ್ಯ

web 2
Published on

ಧಾರವಾಡ : ಕಂಪ್ಯೂಟರ್ ಮತ್ತು ಮೊಬೈಲ್ ಹಾವಳಿಯ ಈ ದಿನಗಳಲ್ಲಿ ನೇತ್ರದ ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಪದ್ಮಶ್ರೀ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೇತ್ರತಜ್ಞರಾದ ಡಾ. ರಶ್ಮಿ ಕುದರಿ ಹೇಳಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಮತ್ತು ಡಾ.ಎಂ.ಎಂ.ಜೋಶಿ ವಿಜ್ಞಾನ ಸಂಸ್ಥೆ ವತಿಯಿಂದ ಗಿಲ್ಡ್‌ನ ಸದಸ್ಯರು ಮತ್ತು ಕುಟುಂಬದವರಿಗೆ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸನೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಣ್ಣುಗಳ ಆರೋಗ್ಯದ ಕಡೆಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಒಟ್ಟಾಗಿಯೇ ಜಾಗೃತಿ ವಹಿಸಬೇಕು. ಅದರಲ್ಲೂ ಕಂಪ್ಯೂಟರ್ ಮುಂದೆ ಕುಳಿತ ದಿನವಿಡಿ ಕೆಲಸ ಮಾಡುವವರಂತೂ ಹೆಚ್ಚಿನ ಕಾಳಜಿಯನ್ನು ವಹಿಸಬಲೇಬೇಕಾದ ಅಗತ್ಯವಿದೆ. ಕಣ್ಣುಗಳಿಗೆ ಒಮ್ಮೆ ಧಕ್ಕೆಯಾದರೆ ಅವುಗಳನ್ನು ಮರಳಿ ಚಿಕಿತ್ಸೆಯ ಮೂಲಕ ಪರಿಪೂರ್ಣ ಆರೋತ್ಯಯುಕ್ತ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಮೊದಲೇ ನೇತ್ರಗಳ ಆರೋಗ್ಯದ ಕಡೆ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕು ಎಂದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್ ಮಾತನಾಡಿ, ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವುದಲ್ಲದೇ, ಕಂಪ್ಯೂಟರ್ ಮತ್ತು ಮೊಬೈಲ್ ಹೆಚ್ಚು ಸಮಯ ಬಳಸಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ನೇತ್ರಗಳ ಆರೋಗ್ಯ ಕುರಿತು ಕಾಳಜಿ ವಹಿಸುವುದು ಅನಿವಾರ್ಯ. ನೇತ್ರದಾನ ಜಾಗೃತಿ ಅಭಿಯಾನದ ಪ್ರಚಾರಕ್ಕೆ ಪತ್ರಿಕೆಗಳು ಮತ್ತು ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಡಾ. ಎಂ.ಎಂ. ಜೋಶಿ ಆಸ್ಪತ್ರೆಯ ತಜ್ಞ ಸಿಬ್ಬಂದಿ ಹರೀಶ ಮುಂಜಿ, ಮಂಜುನಾಥ ಬೂಸಣ್ಣವರ, ಶಿಲ್ಪಾ ನೇತ್ರ ತಪಾಸನೆ ನಡೆಸಿಕೊಟ್ಟರು. ಉಪಾಧ್ಯಕ್ಷ ಬಸವರಾಜ್ ಅಳಗವಾಡಿ, ಖಜಾಂಚಿ ವಿಕ್ರಮ್ ನಾಡಿಗೇರ, ಹಿರಿಯ ಪತ್ರಕರ್ತರಾದ ಗುರುರಾಜ್ ಜಮಖಂಡಿ, ನಿಜಗುಣಿ ದಿಂಡಲಕೊಪ್ಪ, ರವಿಕುಮಾರ್ ಕಗ್ಗಣ್ಣವರ, ರವೀಶ ಪವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net