ಜು. 16 ರಂದು ಪತ್ರಿಕಾ ದಿನಾಚರಣೆ ಮತ್ತು ದತ್ತಿಪುರಸ್ಕಾರ

14GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಶ್ರೀನಿವಾಸ ಭವನದಲ್ಲಿ ಜು.16 ರಂದು ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟ್​ ಸ್ಥಾಪಿಸಿದ ದತ್ತಿನಿಧಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪತ್ರಕರ್ತೆ ರಶ್ಮಿ. ಎಸ್​ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವ್ವ ಸೇವಾ ಟ್ರಸ್ಟ್​ ಸಂಚಾಲಕ ಬಸವರಾಜ ಧಾರವಾಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪತ್ರಕರ್ತರ ಸಂಘದ ಬಲವರ್ಧನೆಗೆ ಇಂತಹ ಕಾರ್ಯಕ್ರಮ ವೇದಿಕೆ ಆಗಲಿದೆ. ದತ್ತಿನಿಧಿ ಮೊಟ್ಟ ಮೊದಲ ರಾಜ್ಯಪ್ರಶಸ್ತಿ ಇದಾಗಿದೆ. ಕೇವಲ ರಾಜ್ಯಮಟ್ಟದ ಪ್ರಶಸ್ತಿ ಅಲ್ಲದೇ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲು ಸಂಘದಲ್ಲಿ ಚಚಿರ್ಸಬೇಕು ಎಂದು ಸಲಹೆ ನೀಡಿದರು.
ಅವ್ವ ಸೇವಾ ಟ್ರಸ್ಟ್​ ಕುರಿತು ಮಾತನಾಡಿ, ಕಳೆದ 12 ವರ್ಷದಿಂದ ಟ್ರಸ್ಟ್​ ವತಿಯಿಂದ ಸೇವೆ ಮಾಡುತ್ತಿದ್ದೇವೆ. ತೋಂಟದಾರ್ಯ ಮಠ, ಮುಂಡರಗಿ ಅನ್ನದಾನಿಶ್ವರ ಮಠದಲ್ಲೂ ದತ್ತಿನಿಧಿ ಇಡಲಾಗಿದ್ದು ಪ್ರಶಸ್ತಿ ಪ್ರಧಾನ ಪ್ರತಿವರ್ಷ ನಡೆಯುತ್ತಿದೆ ಎಂದರು.
ಸಮಾಜದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ನಿಜವಾದ ಪತ್ರಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಏಕಾಏಕಿ ಪತ್ರಕರ್ತರೆಂದು ಇಲಾಖೆಗಳಲ್ಲಿ ವಸೂಲಿ ಮಾಡುವ ಹವ್ಯಾಸ ಆರಂಭವಾಗಿದೆ. ನಿಜಪತ್ರಕರ್ತರು ಈ ಹವ್ಯಾಸ ವಿರುದ್ಧ ಧನಿ ಎತ್ತಬೇಕು ಎಂದು ಬಸವರಾಜ ಧಾರವಾಡ ಹೇಳಿದರು.

ಪತ್ರಿಕಾ ದಿನಾಚರಣೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಜು.16 ರಂದು ಜರಗುವ ಪತ್ರಿಕಾ ದಿನಾಚರಣೆಯನ್ನು ಸಚಿವ ಎಚ್​.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಪತ್ರಸಂದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ. ಶಾಸಕ ಸಿ.ಸಿ. ಪಾಟೀಲ, ಜಿ.ಎಸ್​. ಪಾಟೀಲ, ಚಂದ್ರು ಲಮಾಣಿ, ಎಸ್​.ವಿ. ಸಂಕನೂರು, ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್​. ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವರು. ಜಿಲ್ಲೆಯಲ್ಲಿ 6 ಜನ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದರು.
ಸಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್​.ಎಂ. ಶರೀಫನವರ್​ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲು ಕರೆ ನೀಡಿದರು.
ಟ್ರಸ್ಟ್​ ಸಹ ಸಂಚಾಲಕರು ಎಸ್​. ಎಂ. ಅಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net