

ಮಂಡ್ಯ: ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಹೋರಾಟದ ಮನೋಭಾವ ಕ್ಷೀಣಿಸುತ್ತಿದ್ದು, ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆಗೆ ಪತ್ರಿಕೆಗಳ ಪಾತ್ರ ಬಹಳ ಮುಖ್ಯ ಎಂದು ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಾಕಷ್ಟು ಜನ ಪತ್ರಿಕೋದ್ಯಮಿಗಳು ಪ್ರಾಮಾಣಿಕವಾಗಿ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಇಂದಿನ ಯುವ ಪತ್ರಕರ್ತರು ಆ ಮಾರ್ಗ ಅನುಸರಿಸಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು.
ಉಚಿತ ಆರೋಗ್ಯ ಹಾಗೂ ಶಿಕ್ಷಣ ಎಲ್ಲಿಯವರೆಗೂ ದೊರೆಯುವುದಿಲ್ಲವೋ ಅಲ್ಲಿಯವರೆಗೂ ದೇಶದ ಅಭಿವೃದ್ಧಿ ಅಸಾಧ್ಯ. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದೆ. ಆಳುವ ಸರ್ಕಾರಗಳು ಪದವಿವರೆಗೂ ಉಚಿತ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ಗ್ರಾಮೀಣ ಭಾಗದ ಭಾಷೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿದೆ ಕಣಜ ಸಂಸ್ಕೃತಿ ಇಲ್ಲವಾಗಿದೆ. ಹಳ್ಳಿ ಸೊಗಡು ಮಾಯವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಮಾಧ್ಯಮಗಳು ಸತ್ಯ ಹೇಳಲು ಹಿಂಜರಿಯುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಶ್ರೀರಾಮಚಂದ್ರ ಮಿಷನ್ ರಾಜ್ಯ ಸಂಚಾಲಕ ಕೆ.ಮಧುಸೂದನ್ ಮಾತನಾಡಿ, ಮಕ್ಕಳಿಗೆ ಪಾಲಕರು ಆಸ್ತಿ ಮಾಡಬಾರದು. ಬದಲಿಗೆ ಉತ್ತಮ ಸಂಸ್ಕಾರ ಕಲಿಸಿ ಕೊಡಬೇಕು. ಆಗ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಪ್ರಾರ್ಥನೆ, ಧ್ಯಾನ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕನಿಷ್ಠ 20 ನಿಮಿಷ ಧ್ಯಾನದ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಮನಸ್ಸು ಹಾಗೂ ಹೃದಯ ಸಂವೇದನಶೀಲವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಶಂಭು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಕಾಂಗ್ರೆಸ್ ಮುಖಂಡರಾದ ಚಿದಂಬರ್, ಅಂಜನಾ ಶ್ರೀಕಾಂತ್, ಪತ್ರಕರ್ತ ಕೌಡ್ಲೆ ಚನ್ನಪ್ಪ, ಬಸವೇಗೌಡ, ದ.ಕೋ.ಹಳ್ಳಿ ಚಂದ್ರಶೇಖರ್, ಬಸವರಾಜ್, ಗುರುಬಸವಯ್ಯ, ನಾಗಯ್ಯ ಇತರರಿದ್ದರು.
ಇದೇ ವೇಳೆ ಕೆ.ಮಧುಸೂದನ್ ಹಾಗೂ ಬಿ.ಚಂದ್ರೇಗೌಡ ಅವರನ್ನ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು. ಕ್ಲಬ್‌ನ ನೂತನ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು.