ಪತ್ರಕರ್ತರ ನಿವೇಶನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

udp-8-prathibha puraskara
Published on

ಉಡುಪಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಜೊತೆಗೆ ಕುಟುಂಬದ ಕಡೆಗೂ ಗಮನ ಹರಿಸಬೇಕು. ಪತ್ರಕರ್ತರ ನಿವೇಶನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಹೇಳಿದರು.

ಶನಿವಾರ ಮಣಿಪಾಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಸ್ತೂರ್ಬಾ ಅಸ್ಪತ್ರೆ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ-೨೦೨೩ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.

ಉಡುಪಿ ಜಿಲ್ಲೆ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಪ್ರಸ್ತುತ ಸಿಕ್ಕಿದ ಜವಾಬ್ದಾರಿಯನ್ನು ಭಗವಂತ ಸಾಕ್ಷಿಯಾಗಿ ನಿರ್ವಹಿಸುತ್ತೇನೆ. ಜಿಲ್ಲೆಯನ್ನು ಮತ್ತಷ್ಟು ಆಭಿವೃದ್ಧಿ ಪಥದಲ್ಲಿ ಸಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿಯುವಲ್ಲಿ ಪತ್ರಕರ್ತರ ಕೊಡುಗೆಯೂ ದೊಡ್ಡದಿದೆ. ನಮ್ಮ ಆಚಾರ-ವಿಚಾರ, ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.

ವೈಯಕ್ತಿಕ ಅಲೋಚನೆಗಳು ಸುದ್ದಿರೂಪ ಪಡೆಯಬಾರದು. ಈ ನಿಟ್ಟಿನಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುವವರಿಗೆ ತರಬೇತಿ ನೀಡುವ ಆಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ದಿಢೀರ್ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದ್ದು, ಗುಣಮಟ್ಟ ಕಾಯ್ದುಗೊಳ್ಳುವ ಆಗತ್ಯವಿದೆ. ಸಮಾಜದಲ್ಲಿ ಸಾಕಾರಾತ್ಮಕ ಚಿಂತನೆ ಮತ್ತು ಏಕತೆ ಬಲಗೊಳಿಸುವ ಅಗತ್ಯವಿದೆ ಎಂದರು.

ಮಾಹೆ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಮಕ್ಕಳು ದೇಶದ ಭವಿಷ್ಯ. ಅವರಿಗೆ ಉತ್ತಮ ಶಿಕ್ಷಣ ಕೊಡುವುದು ಅಗತ್ಯ ಎಂದರು.

ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಎಸ್.ಪಿ. ಅಕ್ಷಯ್ ಹಾಕೆ ಮಚೀಂದ್ರ, ಕೆಎಂಸಿ ಮಣಿಪಾಲ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ ಕುಟ್ಟಪ್ಪ ಮತ್ತು ಭವಾನಿ ಸಿಂಗ್, ಪ್ರಧಾನ ಕಾರ‍್ಯದರ್ಶಿ ಜೆ.ಸಿ. ಲೋಕೇಶ, ಕರ‍್ಯದರ್ಶಿಗಳಾದ ಮತ್ತೀಕೆರೆ ಜಯರಾಮ್ ಮತ್ತು ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾ. ಸಮಿತಿ ಸದಸ್ಯ ಅರುಣಕುಮಾರ್ ಶಿರೂರು ಮತ್ತು ಉಡುಪಿ ಜಿಲ್ಲಾ ಕರ‍್ಯನಿರತ ಪತ್ರಕರ್ತರ ಸಂಘದ ರಜತೋತ್ಸವ ಸಮಿತಿ ಕಾರ‍್ಯದರ್ಶಿ ಜಯಕರ ಸುವರ್ಣ ವೇದಿಕೆಯಲ್ಲಿದ್ದರು.
ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತೋತ್ಸವ ಸಮಿತಿ ಸಂಚಾಲಕ ಮಹಮ್ಮದ್ ಶರೀಫ್ ಕಾರ್ಕಳ ಸ್ವಾಗತಿಸಿದರು. ಸಂಘದ ಜಿಲ್ಲಾಧ್ಯಕ್ಷ ರಾಜೇಶ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕರ‍್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ ಸಹಕರಿಸಿದರು. ಕೆ.ಸಿ. ರಾಜೇಶ್ ವಂದಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net