ಸಮಾಜ ತಿದ್ದುವಲ್ಲಿ ಪತ್ರಕರ್ತರ ಪಾತ್ರ ಹಿರಿದು: ನ್ಯಾ. ಸಂತೋಷ ಹೆಗ್ಡೆ

udp-19-rajatha
Published on

ಉಡುಪಿ: ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕೇವಲ ವ್ಯಕ್ತಿಗಳಲ್ಲ. ದುರಾಸೆ ಕಾರಣ. ಸಮಾಜದಲ್ಲಿರುವ ಈ ಭಾವನೆಯನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಹಿರಿದು ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ ಹೆಗ್ಡೆ ಹೇಳಿದರು.

ಭಾನುವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ನಡೆದ ಉಡುಪಿ ಜಿಲ್ಲಾ ಕಾರ‌್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧಿಕಾರ, ದಿಢೀರನೇ ಶ್ರೀಮಂತರಾಗುವ ಬಯಕೆ ಇತ್ಯಾದಿ ಲಾಲಸೆಗಳಿಂದಾಗಿ ಎಲ್ಲಾ ಕ್ಷೇತ್ರಗಳೂ ಹದಗೆಟ್ಟಿದೆ. ಅದಕ್ಕೆ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಸಂವಿಧಾನದತ್ತ ಕಾರ‌್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಜೊತೆಗೆ ಮಾಧ್ಯಮ ರಂಗಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಅದನ್ನು ಮಾಡದಿದ್ದಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದತೆ ನೆಲೆಸುವುದು ಕಷ್ಟ. ಪ್ರತಿಯೊಬ್ಬರೂ ತಮ್ಮ ಕರ್ತವ್ಯದಲ್ಲಿ ತೃಪ್ತಿ ಕಾಣಬೇಕು. ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಿಂದ ಸಮಾಜ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಇತ್ತೀಚೆಗೆ ಪತ್ರಕರ್ತರು ವೃತ್ತಿ ಬದ್ಧತೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕ ಕಾಡುತ್ತಿದೆ. ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ. ಅವರಿಂದಾಗಿ ನೈಜ ಪತ್ರಕರ್ತರು ಗೌಣವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನೈಜ ಪತ್ರಕರ್ತರನ್ನು ಮಾತ್ರ ಪ್ರೋತ್ಸಾಹಿಸುವ ಕಾರ‌್ಯ ಪತ್ರಕರ್ತರ ಸಂಘಗಳು ಮಾಡಬೇಕು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಉಪಾಧ್ಯಕ್ಷ ಎ ಎಸ್ ಎನ್ ಹೆಬ್ಬಾರ್, ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶೀರೂರು, ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಅಭ್ಯಾಗತರಾಗಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ‌್ಯದರ್ಶಿ ಯು. ಎಸ್. ಶೆಣೈ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಕಾರ‌್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ ತಾಲೂಕು ಅಧ್ಯಕ್ಷ ಕಾರ‌್ಯದರ್ಶಿಗಳ ಪಟ್ಟಿ ವಾಚಿಸಿದರು. ಸದಸ್ಯ ಮೈಕೆಲ್ ರಾಡ್ರಿಗಸ್ ಸ್ಥಾಪಕ ಸದಸ್ಯರ ಪಟ್ಟಿ ವಾಚಿಸಿದರು. ರಜತ ಮಹೋತ್ಸವ ಸಮಿತಿ ಸಂಚಾಲಕ ಮಹಮ್ಮದ್ ಶರೀಫ್ ಕಾರ್ಕಳ ಪ್ರಸ್ತಾವನೆಗೈದರು. ಕಾರ‌್ಯದರ್ಶಿ ಜಯಕರ ಸುವರ್ಣ ವಂದಿಸಿದರು. ಹಿರಿಯ ಪತ್ರಕರ್ತ ಕೆ. ಸಿ. ರಾಜೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net