

ಉಡುಪಿ: ಸಮಾಜದಲ್ಲಿರುವ ಎಲ್ಲ ಭಾಷೆಗಳು ಧ್ವೇಷದ ಕಡೆ ಹೋಗುತ್ತಿವೆ. ಎಲ್ಲ ಭಾಷೆಗಳು ಧ್ವೇಷದಲ್ಲಿ ಸಂಗಮವಾಗುತ್ತಿವೆ. ಅದನ್ನು ಶುದ್ಧಗೊಳಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ಒಳ್ಳೆಯ ಬರಹಗಾರರು, ಪತ್ರಕರ್ತರು, ಕಲಾವಿದರಿಂದ ಸಮಾಜದ ಗೌರವ ಉಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಗಾಂಧಿ ಆಸ್ಪತ್ರೆ ಹಾಗೂ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ನಡೆದ ಸಂಘದ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧೆ ಮಧ್ಯೆ ಪತ್ರಕರ್ತರ ವರ್ತನೆ, ಪ್ರೌಢಿಮೆಯ ಭಾಷೆಯನ್ನು ಉಳಿಸಿಕೊಳ್ಳುವುದು ಬಹಳ ದೊಡ್ಡ ಸವಾಲು ಆಗಿದೆ. ಪತ್ರಕರ್ತರ ಬದುಕು ಹಿಂದಿನಂತೆ ಸುಲಭ ಅಲ್ಲ. ಯಾಕೆಂದರೆ ಪತ್ರಿಕೆ ಉದ್ಯಮವಾಗಿ ಬೆಳೆದಿದೆ. ಹೀಗಾಗಿ ಶುದ್ಧ ಸಮಾಜ ನಿರ್ಮಿಸಲು ಪತ್ರಕರ್ತರು ಸಾಧ್ಯವಾದಷ್ಟು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸ್ಥಾಪಕ ಕೋಶಾಧಿಕಾರಿ ಮಹಮ್ಮದ್ ಆರೀಫ್ ಪಡುಬಿದ್ರಿ ಸಂಘದ ಫೇಸ್‌ಬುಕ್ ಪೇಜ್ ಅನಾವರಣಗೊಳಿಸಿ, ಸ್ಥಾಪನಾ ದಿನಾಚರಣೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ದಿನೇಶ್ ಕಿಣಿ ಅಲೆವೂರು, ಕಿರಣ್ ಮಂಜನಬೈಲು, ಜಯಕರ ಸುವರ್ಣ, ಗಣೇಶ್ ಪ್ರಸಾದ್ ಪಾಂಡೇಲು ಅವರನ್ನು ಸನ್ಮಾನಿಸಲಾಯಿತು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಸನ್ಮಾನ ಪತ್ರವನ್ನು ವಾಚಿಸಿದರು. ಸ್ಥಾಪಕ ಸದಸ್ಯ ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.