ಸರ್ಕಾರ, ಜನರ ಸಂಪರ್ಕ ಸೇತುವಾಗಲಿ ಪತ್ರಿಕೋದ್ಯಮ

30 tth 01
ನಿಶ್ಚಲ್ ಜಾದೂಗಾರ್ ಅವರು ಜಾದೂ ಮೂಲಕ ರೂಪಿಸಿದ ಪಾರಿವಾಳವನ್ನು ಹಾರಿಸಿ ಶಾಸಕ ಆರಗ ಜ್ಞಾನೇಂದ್ರ ಪತ್ರಿಕಾ ದಿನಾಚರಣೆ ಉದ್ಘಾಟಿಸಿದರು. ಆರ್.ಎಂ.ಮಂಜುನಾಥ ಗೌಡ, ಕಿಮ್ಮನೆ ರತ್ನಾಕರ್, ಎನ್.ರವಿಕುಮಾರ್, ಮೋಹನ್ ಮುನ್ನೂರು, ಗಜಾನನ ಸುತಾರ್, ಮುಡುಬಾ ರಾಘವೇಂದ್ರ ಇತರರಿದ್ದರು.
Published on

ತೀರ್ಥಹಳ್ಳಿ: ರಾಜಕಾರಣಿಗಳು ಹೀಗಿರಬೇಕೆಂದು ಪಾಠ ಹೇಳುವ ಪತ್ರಕರ್ತರೂ ಪ್ರಾಮಾಣಿಕರಾಗಿರಬೇಕು. ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಬದ್ಧತೆ ಹೊಂದಿರಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ರಾಜ್ಯ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಗಳ ಚಾರಿತ್ರ್ಯ ಹರಣ ವರದಿ ಮಾಡಿ ಪತ್ರಿಕೋದ್ಯಮವನ್ನು ಲಾಭದಾಯಕವಾಗಿ ಮಾಡಿಕೊಳ್ಳುವ ಪತ್ರಕರ್ತ ಸಮಾಜದ ಹಿತವನ್ನು ಬಯಸಲಾರ ಮತ್ತು ಅಂತಹ ವ್ಯಕ್ತಿಗಳಿಗೆ ಯಾವ ಬದ್ಧತೆಯೂ ಇರುವುದಿಲ್ಲ. ಚಾರಿತ್ರ್ಯಹರಣ ಮಾಡುವ ವರದಿಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಮಾಜದ ಕನ್ನಡಿಯಂತಿರುವ ಪತ್ರಿಕಾ ವರದಿಗಳು ಸಂದೇಶ ನೀಡುವ ಪಾಠದಂತಿರಬೇಕು. ಇಂದಿಗೂ ಮುದ್ರಣ ಮಾಧ್ಯಮವೇ ಉತ್ತಮವಾಗಿದೆ. ಒಟ್ಟಾರೆ ಮಾಧ್ಯಮಗಳಲ್ಲಿ ಇತ್ತೀಚೆಗೆ ಬದುಕಿಗೆ ಸಂಬಂಧಿಸಿದ ವಿಚಾರಗಳಿಗಿಂತ ಭ್ರಷ್ಟಾಚಾರ, ಜಾತೀಯತೆ, ಧರ್ಮಾಂಧತೆಗೆ ಹೆಚ್ಚು ಒತ್ತು ನೀಡುತ್ತಿರುವುದು ಬೇಸರದ ಸಂಗತಿ ಎಂದರು.
ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ ನಟರಾಜ ಅರಳಸುರುಳಿ, ಆಮಿಷಗಳ ಮೂಲಕ ಭ್ರಷ್ಟರನ್ನಾಗಿಸುವ ಯತ್ನವನ್ನು ಹಿಮ್ಮೆಟ್ಟಿಸುವ ಮೂಲಕ ಪತ್ರಕರ್ತರು ಓದುಗರ ನಂಬಿಕೆ ಉಳಿಸಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪತ್ರಕರ್ತರನ್ನು ಗೌರವಿಸಲಾಯಿತು. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್, ಜಿಲ್ಲಾ ಸಂಘದ ಕಾರ್ಯದರ್ಶಿ ಅರುಣ್, ತಾಲೂಕು ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಡಿವೈಎಸ್ಪಿ ಗಜಾನನ ಸುತಾರ್, ಮುಡುಬಾ ರಾಘವೇಂದ್ರ, ಟಿ.ಕೆ.ರಮೇಶ್ ಶೆಟ್ಟಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ಮುರುಘರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net