ಪತ್ರಿಕೋದ್ಯಮ ಇಂದು ನಷ್ಟದ ಹಾದಿಯಲ್ಲಿದೆ

prasasthipradana
Published on

ಮಡಿಕೇರಿ: ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದ್ದು, ನಷ್ಟದ ಹಾದಿಯಲ್ಲಿದೆ ಎಂದು ಸಮಾಜ ಸೇವಕ ಮಂಡಿಬೆಲೆ ರಾಜಣ್ಣ ಹೇಳಿದರು.

ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಮತ್ತು ಅತ್ಯುತ್ತಮ ವರದಿಗಳಿಗೆ ನೀಡಲಾಗುವ ೨೦೨೩-೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಪತ್ರಕರ್ತರು ವೃತ್ತಿಯನ್ನಾಗಿ ತೆಗೆದುಕೊಂಡು ಪತ್ರಿಕೆಯಲ್ಲಿ ಕೆಲಸ ಮಾಡಿದಲ್ಲಿ ಜೀವನ ನಡೆಸುವುದು ಕಷ್ಟ. ಇದನ್ನು ಕೇವಲ ಪ್ರವೃತ್ತಿಯನ್ನಾಗಿ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಹೆಚ್ಚಿನ ಪತ್ರಕರ್ತರು ಇಂದು ವೃತ್ತಿಗೆ ಅಗೌರವ ತರುವ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಮೊದಲು ವೃತ್ತಿಗೆ ಗೌರವ ತರುವ ಕೆಲಸವನ್ನು ಪತ್ರಕರ್ತರಿಂದಾಗಬೇಕು ಎಂದ ಅವರು, ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದ್ದು, ನಷ್ಟದ ಹಾದಿಯಲ್ಲಿದೆ ಎಂದರು.

ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಯಾವುದೇ ಸಂಘಟನೆಗಳು ವಿಭಜನೆಗೊಳ್ಳುತ್ತಾ ಸಾಗಿದಲ್ಲಿ, ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಿಂದೆ ಪತ್ರಿಕೆಯಲ್ಲಿ ಹಲವಾರು ತನಿಖಾ ವರದಿಗಳು ಬರುತ್ತಿದ್ದವು. ಆದರೆ, ಇಂದು ಅಂತಹ ವರದಿಗಳು ಪತ್ರಿಕೆಯಿಂದ ಮಾಯವಾಗಿವೆ. ಸಾಕಷ್ಟು ಸವಲತ್ತುಗಳನ್ನು ಸರ್ಕಾರ ಪತ್ರಕರ್ತರಿಗೆ ನೀಡಿದರೂ, ಅವುಗಳಿಗೆ ವಿಧಿಸಿರುವ ಮಾನದಂಡದಿಂದಾಗಿ ಅದು ಎಲ್ಲ ಪತ್ರಕರ್ತರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಮಾನದಂಡಗಳನ್ನು ಸರ್ಕಾರ ಮಾಡಬೇಕೆಂದು ಹೇಳಿದರು.

ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಬರವಣಿಗೆಯನ್ನು ಸಮಾಜದ ಹಿತಕ್ಕಾಗಿ ಬಳಸಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸ ಮಾಡಿದರೂ, ಅದರಿಂದ ಯಶ ಸಾಧ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಯಾವುದೇ ನೂತನ ಸಂಘಗಳನ್ನು ಕಟ್ಟಿಬೆಳೆಸುವುದು ಕಷ್ಟದ ಕೆಲಸ. ಸಂಘದ ಸದಸ್ಯರೆಲ್ಲರೂ, ಒಂದಾಗಿ ಸಂಘದ ದ್ಯೇಯೋದ್ಧೇಶಗಳ ಈಡೇರಿಕೆಗಾಗಿ ದುಡಿಯಬೇಕು ಎಂದರು.

ಸಂಘದಿಂದ ನೀಡಲಾಗುವ ಪ್ರಶಸ್ತಿಗಳಿಗೆ ಪತ್ರಕರ್ತರಾದ ಎಚ್.ಟಿ.ಅನಿಲ್, ವಿನೋದ್ ಮೂಡಗದ್ದೆ, ಡಿ.ಪಿ.ಲೋಕೇಶ್, ವಿಘ್ನೇಶ್ ಭೂತನಕಾಡು, ಉಷಾ ಪ್ರೀತಮ್, ಟಿ.ಜೆ.ಪ್ರವೀಣ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ವಹಿಸಿದ್ದರು. ವೇದಿಕೆಯಲ್ಲಿ ಪತ್ರಿಕಾಭವನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂದ ಕಾರ್ಯದರ್ಶಿ ರಂಜಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net