

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜನ್ಮದಿನ ನಿಮಿತ್ತ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಜೋಶಿ ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನ್ಮದಿನವನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಿದರು.
ಬೆಳಗ್ಗೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜೋಶಿ ಅವರಿಗೆ ಆಯುಷ್ಯ ಆರೋಗ್ಯ ಕಲ್ಪಿಸಿ ಇನ್ನೂ ಹೆಚ್ಚಿನ ಉನ್ನತ ಸ್ಥಾನ ಲಭಿಸಿ ಜನಸೇವೆ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು. ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು, ಹಂಪಲು, ಬಿಸ್ಕಿಟ್ ವಿತರಿಸಲಾಯಿತು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಅಭಿವೃದ್ಧಿಗೆ ಮತ್ತೊಂದು ಹೆಸರು ಪ್ರಲ್ಹಾದ ಜೋಶಿ. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪ್ರಮುಖ ಅವಳಿನಗರಗಳಾಗಿವೆ. ರಾಜಧಾನಿ ಬೆಂಗಳೂರು ನಂತರ ಹು-ಧಾ ನಗರವನ್ನು ಮಾದರಿ ಮಾಡಲು ಹೊರಟಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಜೋಶಿ ಅವರ ಕೆಲಸ ನಮಗೆಲ್ಲ ಸಂತೋಷದಾಯಕವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ಮಂಡಳ ಅಧ್ಯಕ್ಷ ಸುನೀಲ ಮೋರೆ, ಬಸವರಾಜ ಗರಗ, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಸವಿತಾ ಅಮರಶೆಟ್ಟಿ, ರಮೇಶ ದೊಡವಾಡ, ಚಂದ್ರಕಲಾ ಕೊಟಬಾಗಿ, ಸುರೇಶ ಬೇದರೆ, ಜ್ಯೋತಿ ಪಾಟೀಲ, ರಾಹುಲ ಮಲ್ಲಿಗವಾಡ, ಶಕ್ತಿ ಹಿರೇಮಠ, ಪುಷ್ಪ ನವಲಗುಂದ, ಇತರರು ಇದ್ದರು.