

ಹುಬ್ಬಳ್ಳಿ: ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸತತ ಐದನೇ ಬಾರಿ ಗೆಲುವು ತಮ್ಮದಾಗಿಸಿಕೊಂಡಿದ್ದರೂ ಗೆಲುವಿನ ಅಂತರ ಕಡಿಮೆಯಾಗಿರುವುದು ಬಿಜೆಪಿಯ ಉತ್ಸಾಹ ಕುಂದಿಸಿದೆ.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಈಗಷ್ಟೇ ಚುನಾವಣೆ ರಾಜಕೀಯ ಪ್ರವೇಶ ಮಾಡಿದ್ದ ಯುವಕ ವಿನೋದ ಅಸೂಟಿ ಅವರು ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಿದರು. ಮತ ಎಣಿಕೆಯ ಆರಂಭದಿಂದ ಹಿಡಿದು ಕೊನೇ ವರೆಗೂ ಇಬ್ಬರೂ ಅಭ್ಯಥಿರ್ಗಳು ಕುತೂಹಲ ಉಳಿಸಿಕೊಂಡರು.
ಮತ ಎಣಿಕೆ ಶುರುವಾದ ನಂತರ ಕಡಿಮೆ ಅಂತರದಲ್ಲೇ ಮುನ್ನಡೆ ಸಾಧಿಸಿದ ಜೋಶಿ ಅವರಿಗೆ ಅಂತಿಮ ಹಂತದವರೆಗೂ ನಿರೀೆಯ ದೊಡ್ಡ ಲೀಡ್ ಸಿಗಲೇ ಇಲ್ಲ. ಕಾಂಗ್ರೆಸ್ ಅಭ್ಯಥಿರ್ ಅಸೂಟಿ ತೀವ್ರ ಪೈಪೋಟಿ ನೀಡುತ್ತಲೇ ಹೋದರು. ಎಣಿಕೆ ಆರಂಭವಾದಾಗ ಎರಡು, ಮೂರು ಸಾವಿರ ಮತಗಳ ಅಂತರವಿತ್ತು.
ನಂತರದಲ್ಲಿ ಅದು ನಿಧಾನಕ್ಕೆ ಏರುತ್ತ ಹೋಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸತತ ಐದನೇ ಗೆಲುವು ಇದಾಗಿದೆ. ಈ ಹಿಂದೆ ನಾಲ್ಕು ಚುನಾವಣೆ ಪೈಕಿ ಮೂರರಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಜಯ ಸಾಧಿಸಿದ್ದರು. ಅದರಲ್ಲೂ 2019ರ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯದ ವಿನಯ ಕುಲಕಣಿರ್ ಅವರ ವಿರುದ್ಧ 2.05 ಲಕ್ಷ ಮತಗಳ ಭಾರಿ ಮುನ್ನಡೆಯೊಂದಿಗೆ ಜಯ ದಾಖಲಿಸಿದ್ದರು.
ಆದರೆ, ಈ ಬಾರಿ ರಾಜಕೀಯ ಅನನುಭವಿ ವಿನೋದ ಅಸೂಟಿ ಅವರನ್ನು ಮಣಿಸಲು ಜೋಶಿ ಅವರು ಭಾರಿ ಶ್ರಮ ಪಡಬೇಕಾಯಿತು. ಬಹು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಬೀಗಿದ್ದ ಬಿಜೆಪಿಗೆ ಇದು ಹಿನ್ನಡೆ ಉಂಟು ಮಾಡಿತು.
ಚುನಾವಣೆ ಆರಂಭದಿಂದಲೂ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತ ಬಂದಿದ್ದ ಬಿಜೆಪಿಗರಿಗೆ ಕಡಿಮೆ ಅಂತರವು ಒಂದು ರೀತಿ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಸಮಬಲ ಹೊಂದಿರುವುದು ಇತ್ಯಾದಿ ಕಾರಣಗಳಿಗೆ ಕಾಂಗ್ರೆಸ್ ಅಭ್ಯಥಿರ್ ಅಸೂಟಿ ಅವರು ಮೋದಿ ಅಲೆಯ ಮಧ್ಯೆಯೂ ಪೈಪೋಟಿ ನೀಡಿದರು.
ಪ್ರಲ್ಹಾದ ಜೋಶಿ ಅವರು ಕೂಡ ಪ್ರಚಾರ ಸಂದರ್ಭದಲ್ಲಿ ಮತದಾರರು ಬೃಹತ್ ಅಂತರದ ಗೆಲುವು ನೀಡಲಿದ್ದಾರೆ ಎಂದು ವಿಶ್ವಾಸದಿಂದ ಹೇಳುತ್ತ ಬಂದಿದ್ದರು. ಸ್ಟಾರ್ ಪ್ರಚಾರಕರು ಬಂದು ಹೋಗಿದ್ದರು. ಈ ಎಲ್ಲ ಲೆಕ್ಕಾಚಾರಗಳು, ನಿರೀೆಗಳು ಹುಸಿಯಾಗಿವೆ. ಕೇವಲ 95ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿರುವುದು ಸ್ವತಃ ಬಿಜೆಪಿಗರಿಗೂ ಅಚ್ಚರಿ ತಂದಿದೆ.
ಗೆಲುವಿನ ಇತಿಹಾಸ:
2004 ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜೋಶಿ ಅವರು ಒಂದು ಲಕ್ಷಕ್ಕಿಂತ ಕಡಿಮೆ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.
ಉಳಿದಂತೆ 2009ರಲ್ಲಿ 137660, 2014ರಲ್ಲಿ 111657 ಮತಗಳು, 2019ರಲ್ಲಿ ವಿಶೇಷವೆಂದರೆ 2.5 ಲಕ್ಷ ಮತಗಳ ಅಂತರದ ಗೆಲವು ಸಾಧಿಸಿದ್ದರು.
ಪ್ರಲ್ಹಾದ ಜೋಶಿ ಅವರು ಪ್ರತಿ ಚುನಾವಣೆಯಲ್ಲಿ ಪಡೆದ ಮತಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಿಜೆಪಿಗೆ ಸಮಾಧಾನ ತಂದಿರಬಹುದು. ಮೊದಲ ಚುನಾವಣೆಯಲ್ಲಿ 385084 ಮತಗಳು, ಎರಡನೇ ಚುನಾವಣೆ 446786, ಮೂರನೇ ಚುನಾವಣೆಯಲ್ಲಿ 545935 ಮತಗಳು, ನಾಲ್ಕನೇ ಚುನಾವಣೆಯಲ್ಲಿ 684837 ಹಾಗೂ ಪ್ರಸ್ತುತ ಚುನಾವಣೆಯಲ್ಲಿ 716231 ಮತಗಳನ್ನು ಪಡೆದಿದ್ದಾರೆ. ಅಂದರೆ ಚುನಾವಣೆಯಿಂದ ಚುನಾವಣೆಗೆ ಜೋಶಿ ಅವರ ಮತ ಗಳಿಕೆ ಪ್ರಮಾಣ ಹೆಚ್ಚುತ್ತಲೇ ಹೋಗಿದೆ. ಅದು ಕೂಡ ಲಕ್ಷಗಳ ಲೆಕ್ಕದಲ್ಲಿ ಅಧಿಕವಾಗಿದೆ.