ಸುಳ್ಳು- ಕಾಂಗ್ರೆಸ್ ನಾಣ್ಯದ ಎರಡು ಮುಖಗಳಿದ್ದಂತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

Published on

ಹುಬ್ಬಳ್ಳಿ: ಸುಳ್ಳು ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ. ಒಂದು ವೇಳೆ ನೀವು ಸತ್ಯವಂತರೇ ಆಗಿದ್ದರೆ ದೇಶದ ಜನರು ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ನವರಿಗೆ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸೆ ಒಂದು ಸುಳ್ಳು. ಹೀಗಿದ್ದರೂ ಅದರ ನಾಯಕರು ಮೋದಿ ಹಾಗೂ ಬಿಜೆಪಿ ಮೇಲೆ ಸುಳ್ಳು ಪದ ಪ್ರಯೋಗ ಮಾಡುತ್ತಿದ್ದಾರೆ. ಅರು ದಶಕ ಗರೀಭಿ ಹಠಾವೋ ಎಂದು ಸುಳ್ಳು ಹೇಳಿದವರು ಯಾರು? ಬಡತನ ಇಲ್ಲದಿದ್ದರೆ ಉಚಿತ ಕೊಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ಮನಸ್ಸಿಗೆ ಬಂದಂತೆ ಮಾತನಾಡಬೇಡಿ ಎಂದು ತಿವಿದರು.

ಉತ್ತರ ಪ್ರದೇಶದಲ್ಲಿ ರಾರ್ಬಟ್ ವಾದ್ರಾ ಅವರನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಅವರು ಸೋಲುತ್ತಾರೆ. ಅಲ್ಲಿ ಕಾಂಗ್ರೆಸ್ಗೆ ಶೂನ್ಯ ಸಿಗಲಿದೆ. ಇನ್ನು ಮಹಾರಾಷ್ಟ್ರದಲ್ಲಿ 2-3 ಸೀಟು ಗೆಲ್ಲೋದು ಕಷ್ಟ. ಉತ್ತರಾಖಂಡದಂತಹ ಸಣ್ಣ ರಾಜ್ಯದಲ್ಲೂ ಅಸ್ತಿತ್ವವಿಲ್ಲ. ಇಂಥ ದುಃಸ್ಥಿತಿಗೆ ತಲುಪಿದೆ ಎಂದರು.

ಎಫ್ ಐಆರ್ ಕೈಬಿಡಿ:
ಕರ್ನಾಟಕವನ್ನು ಪಾಕ್ ಗಿಂತ ಕಡೆ ಮಾಡುತ್ತಿದ್ದೀರಿ, ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ ಹಾಕಿರುವ ಎಫ್ಐಆರ್ ಕೂಡಲೇ ಕೈಬಿಡಿ ಎಂದು ಜೋಶಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವರೇನು ಕರ್ನಾಟಕ ಆಳುತ್ತಿದ್ದಾರೋ ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತರಾಟೆಗೆ ತೆಗೆದುಕೊಂಡರು.

ಹನುಮಾನ್ ಚಾಲೀಸಾ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದ ಸಚಿವರು, ಪಾಕ್ ಪರ ಘೋಷಣೆ ಕೂಗಿದಾಗಲೂ ಹೀಗೆ ಹಿಂದು ವಿರೋಧಿ ನಡೆ ತೋರಿದ್ದೀರಿ ಎಂದು ಹರಿಹಾಯ್ದರು.

ಚರ್ಚೆಗೆ ಸಿದ್ಧ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಿರುವ ಅನುದಾನ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಒಂದೇ ವೇದಿಕೆಯಲ್ಲಿ ಚರ್ಚೆಗೆ ನಾವ್ ರೆಡಿ ಇದ್ದು, ರಾಜ್ಯ ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆಗೆ ಬರಲಿ. ಬಹಿರಂಗ ಚರ್ಚೆ ಎಂದರೆ ಸಾರ್ವಜನಿಕರನ್ನು ಕರೆತಂದು ಹೊಡೆದಾಡುವುದು ಅಲ್ಲ ಎಂದು ಸೂಚ್ಯವಾಗಿ ಹೇಳಿದರು.

ರಾಜ್ಯಕ್ಕೆ ಯಾವಾಗ ಎಷ್ಟು ಅನುದಾನ ಕೊಡಲಾಗಿದೆ ಎಂಬುದನ್ನು ಅಂಕಿಅಂಶ ಸಮೇತ ನಿರ್ಮಲಾ ಸೀತಾರಾಮನ್ ಅವರು ಕೊಟ್ಟಿದ್ದಾರೆ. ಯುಪಿಎ ಹಾಗೂ ಎನ್‌ಡಿಎ ಅವಧಿಯ ಬರ ಪರಿಹಾರ, ಅತಿವೃಷ್ಟಿ ಪರಿಹಾರದ ಬಗ್ಗೆ ದೇಶದ ಜನರಿಗೆ ಗೊತ್ತಾಗಲಿ ಎಂದು ಸಚಿವ ಜೋಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net