

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಅವರೇ ತಮ್ಮ ಬಳಿ ಇಷ್ಟು ಶಾಸಕರು ಇದ್ದಾರೆ ಎಂದು ಪರಸ್ಪರ ವ್ಯಾಪಾರದಲ್ಲಿ ಮುಳುಗಿದ್ದಾರೆ. ಈ ವಿಷಯವನ್ನು ಡೈವರ್ಟ್ ಮಾಡುವ ಸಲುವಾಗಿ ಬಿಜೆಪಿಯವರು 55 ಕಾಂಗ್ರೆಸ್ ಶಾಸಕರಿಗೆ ಇಡಿ ಬೆದರಿಕೆ ಒಡ್ಡಿ ಆಪರೇಶನ್ ಕಮಲ ಮಾಡಲು ಹೊರಟಿದ್ದಾರೆ ಎಂದು ಸುಳ್ಳು ಹರಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ವಿಜಯಾನಂದ ಕಾಶಪ್ಪನವರ ಇಡಿ ಬೆದರಿಕೆಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ಜನಾದೇಶ ಇಲ್ಲ. ಆಡಳಿತ ನಡೆಸಲು ಬೇಕಾದ ಸಂಖ್ಯಾಬಲದ ವ್ಯತ್ಯಾಸ ಬಹಳ ದೊಡ್ಡದಿದೆ. ಹಾಗಾಗಿ ಬಿಜೆಪಿ ಸರ್ಕಾರ ರಚನೆಯ ಯಾವುದೇ ಪ್ರಯತ್ನ ಮಾಡುವುದಿಲ್ಲ. ಇದು ಪಕ್ಷದ ಅಧಿಕೃತ ನಿಲುವು. ಆದರೆ, ಕಾಂಗ್ರೆಸ್‌ನ ಕೆಲವರು ತಮ್ಮ ಕಚ್ಚಾಟವನ್ನು ಮರೆಮಾಚಲು ಈ ರೀತಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಏನಾದರೂ ಆರ್ಥಿಕ ಅವ್ಯವಹಾರ ಮಾಡಿದರೆ ಇಡಿ ಮಧ್ಯ ಪ್ರವೇಶ ಮಾಡುತ್ತದೆ. ಕಾಶಪ್ಪನವರ ಅಂತಹ ತಪ್ಪು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಸಿಎಂ, ಡಿಸಿಎಂ ಶಾಸಕರನ್ನು ಸೆಳೆದುಕೊಳ್ಳಲು ತಾವೇ ವ್ಯಾಪಾರ ಶುರು ಮಾಡಿದ್ದಾರೆ. ಶಾಸಕರ ಬೆಂಬಲ ಪಡೆದುಕೊಳ್ಳಲು ಮನಿ ಪವರ್ ಬಳಸಿಕೊಳ್ಳುತ್ತಿದ್ದಾರೆ. ಕೊಳ್ಳುವ ಇಬ್ಬರೂ ಬಲಾಢ್ಯರಾಗಿದ್ದಾರೆ. ಮಾರ್ಕೆಟ್ ನಲ್ಲಿ ಬಿಕರಿ ಆಗಲು ಅನೇಕರು ತಯಾರಾಗಿದ್ದಾರೆ. ಆದರೆ, ಬಿಜೆಪಿ ಯಾವುದೇ ಆಪರೇಶನ್ ಮಾಡುವುದಿಲ್ಲ. ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಕಾಂಗ್ರೆಸ್‌ಗೆ ಸಂಪೂರ್ಣ ಜನಾದೇಶ ಇದೆ. ಇಂತಹ ಸಂದರ್ಭದಲ್ಲಿ ವ್ಯಾಪಾರ ಮಾಡುವುದನ್ನು ಸಿಎಂ, ಡಿಸಿಎಂ ಬಿಡಬೇಕು. ಕಮಾಂಡ್ ಎನ್ನುವುದಿದ್ದರೆ ಹೈಕಮಾಂಡ್ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ನಿಯಂತ್ರಿಸಬೇಕು. ಆರ್ಥಿಕವಾಗಿ ದಿವಾಳಿಯಾಗಿ ಎಲ್ಲ ರಂಗದಲ್ಲಿಯೂ ವಿಫಲವಾಗಿರುವ ರಾಜ್ಯದ ಆಡಳಿತ ಸರಿ ದಾರಿಗೆ ತರುವ ಯತ್ನ ಮಾಡಬೇಕು. ರಾಜ್ಯದಲ್ಲಿ ಕಳೆದ ವರ್ಷ 973 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳ ವರ್ಗಾವಣೆ ದಂಧೆ ಜೋರಾಗಿದೆ. ಹೆಚ್ಚು ಹಣ ಕೊಟ್ಟವರಿಗೆ ಪೋಸ್ಟ್ ಎಂಬಂತಾಗಿದೆ. ಕರ್ನಾಟಕ ಭ್ರಷ್ಟರು, ಭಯೋತ್ಪಾದಕರಿಗೆ ಸ್ವರ್ಗವಾಗಿದೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದ್ದರಿಂದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲಿ ಇಂತಹ ಸ್ಥಿತಿ ಇದ್ದರೂ ರಾಹುಲ್ ಗಾಂಧಿ ಇದರ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರವು ಕಳೆದ ವರ್ಷ 7.73 ಲಕ್ಷ ನೇಮಕಾತಿ ಆದೇಶ ನೀಡಿದೆ. ಪ್ರತಿ ತಿಂಗಳು ರೋಜಗಾರ ಮೇಳ ಮಾಡುತ್ತಿದೆ ಎಂದರು.
ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಮೇಲೆ ಆರೋಪ ಸರಿಯಲ್ಲ ಎಂದು ಹೇಳಿದ್ದೇನೆ ಎಂದು ಜೋಶಿ ಹೇಳಿದರು.