ಅಹಿತಕರ ಘಟನೆಗೆ ಕಾಂಗ್ರೆಸ್ ಕಾರಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

IMG-20240308-WA0019.jpg
Published on

ಹುಬ್ಬಳ್ಳಿ: ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವುದು ಹಾಗೂ ಪಾಕ್ ಪರ ಘೋಷಣೆ ಕೂಗಿದರೂ ಸುಮ್ಮನಿರುವಂತಹ ಕಾಂಗ್ರೆಸ್‌ನ ಮಾನಸಿಕತೆಯಿಂದಾಗಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಅಯೋಧ್ಯೆ ರಾಮಮಂದಿರ ಮಾದರಿಯಲ್ಲಿ ಶಿವಲಿಂಗಕ್ಕೆ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಸಭಾ ಸದಸ್ಯ ಸೈಯ್ಯದ ನಾಸೀರ್ ಹುಸೇನ್ ಅವರ ಪಕ್ಕದಲ್ಲಿ ನಿಂತು ದೇಶ ವಿರೋಧಿ ಘೋಷಣೆ ಕೂಗಿದರೂ ಸುಮ್ಮಿರುವುದನ್ನು ನೋಡಿದರೆ ಅವರು ಸಹ ಪರೋಕ್ಷವಾಗಿ ಸಹಕಾರ ನೀಡಿದ್ದು ಸ್ಪಷ್ಟವಾಗುತ್ತದೆ. ಸೌಜನ್ಯಕ್ಕಾದರೂ ಅವರು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಕಾಂಗ್ರೆಸ್ ನಾಯಕರಿಗೆ ಬಹಳ ಆಪ್ತನಾಗಿದ್ದಾನೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋಗಳು ವೈರಲ್ ಆಗಿವೆ. ನಾಸೀರ್ ಹುಸೇನ್ ಅವರು ಸಾರ್ವಜನಿಕ ಸಭ್ಯತೆಗಾದರೂ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ಘೋಷಣೆಗೆ ಅವರ ಸಹಕಾರ ಇರುವುದು ಸ್ಪಷ್ಟವಾದಂತಾಗುತ್ತದೆ ಎಂದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ನೀಡಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡು ಬರುತ್ತಿಲ್ಲ. ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಬಾಂಬ್ ಸ್ಪೋಟ ಘಟನೆ ನಡೆದಿದೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹಣ ಬಳಕೆ ಕುರಿತು ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡದ ಕಾರಣ ಅನುದಾನ ಬಾರದೇ ಇರಬಹುದು. ಅನೇಕ ರಾಜ್ಯಗಳಲ್ಲಿ ದಾಖಲೆಗಳನ್ನು ಸರಿಯಾಗಿ ನೀಡಿಲ್ಲ, ಗುತ್ತಿಗೆದಾರರ ಕಡೆಯಿಂದ ಕೆಲಸ ಮಾಡಿಸಲಾಗಿದೆ ಎಂಬ ಸಂಗತಿಗಳಿಂದ ಅನುದಾನ ವಿಳಂಬವಾಗಿರಬಹುದು. ನರೇಗಾ ಮಹತ್ವದ ಯೋಜನೆಯಾಗಿದ್ದು, ಅನುದಾನ ಉಳಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದಂತೆ ಅನುದಾನ ಬಿಡುಗಡೆಯಾಗುತ್ತದೆ ಎಂದರು.

ಮಹದಾಯಿ ಯೋಜನೆಗೆ ಸಂಬಂಧಿಸಿ ಕಳಸಾ ನಾಲೆಯ ನೀರು ಪಡೆಯಲು ರಾಜ್ಯ ಸರ್ಕಾರದಿಂದ ಪ್ರಸ್ತಾವಣೆ ಬಂದಿಲ್ಲ. ಬಂಡೂರಿ ಯೋಜನೆಗಾಗಿ ಹುಲಿ ಸಂರಕ್ಷಣೆ ಪ್ರದೇಶದ ಬಗ್ಗೆ ವರದಿ ಕೊಟ್ಟಿಲ್ಲ. ರಾಜ್ಯ ಸರ್ಕಾರ ವರದಿ ನೀಡಿದ ಬಳಿಕ ಅನುಮತಿ ನೀಡಲಾಗುತ್ತದೆ. ಮಹದಾಯಿ ಯೋಜನೆ ಬಗ್ಗೆ ಬಿಜೆಪಿ ಧನಾತ್ಮಕವಾಗಿದೆ. ಆದರೆ, ಕಾಂಗ್ರೆಸ್ ಯಾವಾಗಲೂ ಅಡ್ಡಗಾಲು ಹಾಕುತ್ತಲೇ ಬಂದಿದೆ ಎಂದು ಜೋಶಿ ಟೀಕಿಸಿದರು.

ಅಭಿನಂದನೆ: ಹುಬ್ಬಳ್ಳಿಯ ಹೆಮ್ಮೆಯ ಪುತ್ರಿ ಪದ್ಮಶ್ರೀ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಖುಷಿಯ ಸಂಗತಿ. ಅವರು ಸರಳ ಜೀವಿಯಾಗಿದ್ದು, ಅಂಥವರನ್ನು ರಾಜ್ಯಸಭೆಗೆ ಕಳುಹಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುವೆ ಎಂದು ಜೋಶಿ ಹೇಳಿದರು.

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಕೊಡುಗೆ ನೀಡಿದ್ದಾರೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಇದರಿಂದ ಒಳ್ಳೆಯದಾಗಲಿದೆ. ವಿದೇಶಗಳಲ್ಲಿ ಎಲ್ಲ ದರಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ದೇಶದಲ್ಲಿ ಎಲ್ಪಿಜಿ ದರ ದೊಡ್ಡ ಪ್ರಮಾಣದ ಇಳಿಕೆ ಮಾಡಿದ್ದು ಸ್ವಾಗತಾರ್ಹ ಎಂದರು.

ಲೋಕಸಭಾ ಟಿಕೆಟ್ ಹಂಚಿಕೆ ವಿಚಾರವನ್ನು ವರಿಷ್ಠರು ನೋಡಿಕೊಳ್ಳುತ್ತಾರೆ. ಏಳು&ಎಂಟು ಬಾರಿ ಗೆದ್ದವರಿಗೂ ಪಕ್ಷ ಟಿಕೆಟ್ ನೀಡಿದೆ. ಶೀಘ್ರದಲ್ಲೇ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಹಳಬರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ಕೇವಲ ಊಹಾಪೋಹ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಾಕಷ್ಟು ಜನಪ್ರಿಯತೆ ಹಾಗೂ ಗೆಲ್ಲುವ ನಾಯಕರಿಗೆ ಟಿಕೆಟ್ ಸಿಗಲಿದೆ ಎಂದು ಜೋಶಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net