ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆ ಸಂಭ್ರಮವನ್ನು ಸಹಿಸಿಕೊಳ್ಳಲು ಆಗದೇ ರಾಮಭಕ್ತರಲ್ಲಿ ಭಯ ಹುಟ್ಟಿಸಲು ರಾಜಕೀಯ ಕಾರಣಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಶ್ರೀಕಾಂತ ಪೂಜಾರಿಯನ್ನು ಬಂಧಿಸಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳು ರಾಮಮಂದಿರ ಸಂಭ್ರಮದಲ್ಲಿ ಪಾಲ್ಗೊಳ್ಳಬಾರದು ಎಂಬ ದುರುದ್ದೇಶದಿಂದ ಕಾಂಗ್ರೆಸ್ನವರು ಹೀಗೆ ಮಾಡುತ್ತಿದ್ದಾರೆ. ಒಂದು ಕೋಮಿನ ಮತಕ್ಕಾಗಿ ಇಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಕರಸೇವಕನನ್ನು ಬಂಧಿಸುವ ಮೂಲಕ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೈಸುಟ್ಟುಕೊಂಡಿದ್ದಾರೆ ಎಂದರು.
ಕರಸೇವಕರ ಬಂಧನ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಬದಲಾಗಿ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ದೂರಿದರು.
30 ವರ್ಷಗಳ ಹಿಂದಿನ ಕೇಸ್ ಅನ್ನು ಕೆದಕಿದೆ. ಈಗಾಗಲೇ ಅಂದಿನ ಗಲಭೆ ವಿಷಯದಲ್ಲಿ ಬಹುತೇಕರು ಜಾಮೀನು ಪಡೆದಿದ್ದಾರೆ. ಎ್ಐಆರ್ ಕೂಡ ಇವರಿಗೆ ಸಿಕ್ಕಿಲ್ಲ. ಇಷ್ಟಿದ್ದರೂ ಯಾವ ಆಧಾರದಲ್ಲಿ ಬಂಧಿಸಿದರು ಎಂದು ಜೋಶಿ ಪ್ರಶ್ನಿಸಿದರು.
ಪೂಜಾರಿ ವಿರುದ್ಧ 16 ಕೇಸ್ ಇವೆ ಎಂದು ಸಿಎಂ ಬಾಲಿಶ ಹೇಳಿಕೆ ನೀಡಬಾರದು. ಆ ಎಲ್ಲ ಕೇಸ್ ಮುಗಿದು ಹೋಗಿವೆ. ಶ್ರೀಕಾಂತ ಪೂಜಾರಿಗೆ ಜಾಮೀನು ಸಿಕ್ಕಿರುವುದರಿಂದ ಮುಂದಿನ ಹೋರಾಟದ ಕುರಿತು ಬಿಜೆಪಿ ನಾಯಕರೊಂದಿಗೆ ಚಚಿರ್ಸಿ ನಿರ್ಧರಿಸಲಾಗುವುದು ಎಂದು ಉತ್ತರಿಸಿದರು.