ಕೇಂದ್ರದ ಸಾಧನೆಗಳನ್ನು ಜನರಿಗೆ ತಲುಪಿಸಿ

bjp meeting new
Published on

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2047ರ ಭಾರತ ಹೇಗಿರಬೇಕೆಂದು ಅಧಿಕಾರಿಗಳ ಸಮ್ಮುಖದಲ್ಲಿ ನೀಲನಕ್ಷೆಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಇದು ಮೋದಿಯವರ ದುರದೃಷ್ಟಿಯ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದಲ್ಲಿ ಅಭಿವೃದ್ದಿಯ ಕ್ರಾಂತಿ ಮಾಡಿದೆ. ಈ ನಿಮಿತ್ತ ಜೂನ್ 1 ರಿಂದ 30 ರವರೆಗೆ ದೇಶಾದ್ಯಂತ ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟದ ಪ್ರತಿ ಮನ ಹಾಗೂ ಮನೆಗಳಿಗೆ ಕರಪತ್ರಗಳ ಮೂಲಕ ತಲುಪಿಸಬೇಕು. ವಿಶ್ವವೇ ಪ್ರಧಾನಿ ಮೋದಿಯವರನ್ನು ಕೊಂಡಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನರ ಮುಂದೆ ಇಡಬೇಕಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳು ಬೋಗಸ್ಸಾಗಿವೆ. ಅವುಗಳಿಗೆ ತಳ-ಬುಡವಿಲ್ಲ. ಜನರಿಗೆ ಇದರ ಬಗ್ಗೆ ಸ್ಪಷ್ಟ ಅರಿವಿಲ್ಲ. ಮುಂಬರುವ ದಿನಗಳಲ್ಲಿ ಜನರು ದಂಗೆ ಎಳುವ ಕಾಲ ದೂರವಿಲ್ಲ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸೋಲು-ಗೆಲುವನ್ನು ಸವಾಲಾಗಿ ಸ್ವಿಕರಿಸೋಣ. ಪಕ್ಷದ ಸಂಘಟನೆ ನಿರಂತರವಾಗಿರಬೇಕು ಎಂದರು.

ವಿಭಾಗ ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ ಮಾತನಾಡಿದರ. ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾಪೌರ ಈರೇಶ ಅಂಚಟಗೇರಿ, ಉಪ ಮಹಾ ಪೌರರಾದ ಉಮಾ ಮುಕುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ರವಿ ನಾಯಕ, ಈಶ್ವರಗೌಡ ಪಾಟೀಲ, ಬಸವರಾಜ ಅಮ್ಮಿನಬಾವಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net