

ಹುಬ್ಬಳ್ಳಿ : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ಗಮನಕ್ಕೆ ಇದ್ದೇ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಯಾವುದೇ ಪಾತ್ರ ಇರದಿದ್ದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿ ವರ್ಗಾವಣೆ ಏಕೆ ಮಾಡಿದಿರಿ ? ಸಿಬಿಐ ತನಿಖೆ ಬಗ್ಗೆ ಸಿದ್ದರಾಮಯ್ಯ ಅವರಿಗೆ ಭಯ ಏಕೆ ? ಎಂದು ಪ್ರಶ್ನಿಸಿದರು.
ಸ್ವಂತಕ್ಕೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ನಡೆದ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಇದು. ನಾನೊಬ್ಬ ಸಮಾಜವಾದಿ, ಲೋಹಿಯಾವಾದಿ ಎಂದು ಹೇಳಿಕೊಳ್ಳುವ ಅರ್ಹತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ. ಮುಡಾ ಮತ್ತು ಎಸ್ಸಿ, ಎಸ್ಟಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ ಎಂದು ದೂರಿದರು.
ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಅವರಿವರನ್ನು ಎಸ್ಐಟಿ ಬಂಧನ ಮಾಡಲಾಗುತ್ತಿದೆ. ಇದುವರೆಗೆ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿ, ಈಗ ನೋಟಿಸ್ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭ್ರಷ್ಟಾಚಾರ ಹೇಗೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಅವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.
ಬಣವಿಗೆ ಬೆಂಕಿ ಹತ್ತಿದಾಗ ಅದರಲ್ಲಿ ಬೀಡಿ ಅಥವಾ ಸಿಗರೇಟ್ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತು ಎಂದು ಟೀಕಿಸಿದ ಪ್ರಲ್ಹಾದ ಜೋಶಿ, ಇದು ತಮ್ಮ ಕೊನೆಯ ಅವಧಿಯೆಂದು ಭ್ರಷ್ಟಾಚಾರದ ಪರಮಾವಧಿಗೆ ಸಿದ್ದರಾಮಯ್ಯ ತಲುಪುತ್ತಿದ್ದಾರೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದು ಇದೆ ಮೊದಲಲ್ಲ. ಈ ಹಿಂದೆಯೂ ಡಿನೋಟಿಫೇಕಶನ್ ಮಾಡಿದ್ದರು. ಆದರೆ, ಅದರಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.