

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಪಾಲ್ಗೊಂಡಿದ್ದ ಸಭೆಯಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಕನಸು ಬಿದ್ದಿತ್ತಾ? ಅಥವಾ ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರೂರ್ ಪಾಲ್ಗೊಂಡಿದ್ದ ಸಭೆಯಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪವಾಗಿದೆ ಎಂಬುದು ಆಧಾರ ರಹಿತ ಆರೋಪ. ಸುಮ್ಮನೆ ಆರೋಪ ಮಾಡುವುದು, ಪ್ರಚಾರ ತೆಗೆದುಕೊಳ್ಳುವುದು ಬಿಟ್ಟರೆ ಇದರ ಹಿಂದೆ ಏನು ಇಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಹೇಳಿದರು.
2-3 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಟಿ ದಾಳಿ ನಡೆದಾಗ ಪತ್ತೆಯಾದ 80-85 ಕೋಟಿ ರೂ. ಹಣ ಕಾಂಗ್ರೆಸ್ಗೆ ಸೇರಿದ್ದು ಎಂದು ಜೋಶಿ ಹೇಳಿದ್ದರು. ಆ ಹಣ ಯಾರದ್ದು, ಮನೆ ಯಾರಿಗೆ ಸೇರಿದ್ದು ಎಂಬುದನ್ನು ಈಗಲಾದರೂ ಬಹಿರಂಗ ಪಡಿಸಲಿ. ಸಿಬಿಐ, ಐಟಿ, ಇಡಿ ಎಲ್ಲವೂ ಇವರ ಬಳಿಯೇ ಇದೆ. ಆಗ ಜೋಶಿ ಅವರು ತೆಲಂಗಾಣ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ 1 ಸಾವಿರ ಕೋಟಿ ರೂ. ಸಂಗ್ರಹಿಸುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.
40 ಸೀಟು ಗೆಲ್ಲುವುದಿಲ್ಲ
2018ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವ ಇದ್ದಾಗಲೂ ಬಿಜೆಪಿ ಗೆದ್ದಿದ್ದು 104 ಕ್ಷೇತ್ರಗಳನ್ನು. ಈಗ ಚುನಾವಣೆ ನಡೆದರೆ 135 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬುದು ಅಸಾಧ್ಯದ ಮಾತು. ನನ್ನ ಪ್ರಕಾರ ಬಿಜೆಪಿ 40 ಕ್ಷೇತ್ರಗಳಲ್ಲೂ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ರಿಪೇರಿ ಮಾಡಲಾಗದಷ್ಟು ಕೆಟ್ಟು ಹೋಗಿದೆ. ಮಧ್ಯಪ್ರದೇಶ, ಛತ್ತಿಸಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ತೇಲಂಗಾಣದಲ್ಲಿ ಅಧಿಕಾರ ಹಿಡಿಯುವ ಅವಕಾಶವಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ ಅತಿ ಹೆಚ್ಚು ಸ್ಥಾನಗಳು ಬರಲಿವೆ ಎಂದು ಶೆಟ್ಟರ್ ಹೇಳಿದರು.