ಧಾರವಾಡದಲ್ಲಿ ಮತ್ತಷ್ಟು ಅಭಿವೃದ್ಧಿ ನಿರೀಕ್ಷೆ, ಡಾ. ವಿಎಸ್ ವಿ ಪ್ರಸಾದ ಆಶಯ

IMG-20240605-WA0036.jpg
Published on

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ಐದನೇ ಸಲ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿರುವ ಪ್ರಲ್ಹಾದ ಜೋಶಿ ಅವರಿಗೆ ಕ್ಷೇತ್ರದ ಜನರು ಮತ್ತಷ್ಟು ಕೆಲಸಗಳನ್ನು ಮಾಡಲು ಅವಕಾಶ ಕೊಟ್ಟಿದ್ದಾರೆ.

ಬಿಜೆಪಿಯು ರಾಷ್ಟ್ರೀಯವಾದಿ ಪಕ್ಷವಾಗಿದ್ದು, ಅಂತಹ ಪಕ್ಷದಿಂದ ಸ್ಪರ್ಧಿಸಿ ಇದೀಗ ಇತಿಹಾಸ ಸೃಷ್ಟಿಸಿರುವ ಜೋಶಿ ಅವರು, ಕ್ಷೇತ್ರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿರೀಕ್ಷೆ ಇದೆ ಎಂದು ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿಎಸ್ವಿ ಪ್ರಸಾದ ತಿಳಿಸಿದ್ದಾರೆ.

ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿ ಜೋಶಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಧಾರವಾಡ ಮಾತ್ರವಲ್ಲ, ಉತ್ತರ ಕರ್ನಾಟಕದ ಜನರಿಗೆ ಬಹಳಷ್ಟು ಯೋಜನೆಗಳನ್ನು ತಂದು ಜಾರಿ ಮಾಡಿದ್ದಾರೆ.

ಸಂಪತ್ಭರಿತ ಸಂಸ್ಕ್ರತಿ, ನೈಸರ್ಗಿಕ ಸಂಪನ್ಮೂಲ ಹೊಂದಿರುವ ಧಾರವಾಡ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳು, ಕೃಷಿ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಗಮನ ಹರಿಸಿ ಸುಧಾರಣೆ ತರಲು ಸಾಧ್ಯವಿದೆ. ಇಂತಹ ನಿರೀಕ್ಷೆ ಯನ್ನು ಈ ಭಾಗದ ಜನರು ಇಟ್ಟುಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸುವುದು, ಕೈಗಾರಿಕೆಗಳನ್ನು ತಂದು ಉದ್ಯೋಗ ಹೆಚ್ಚಿಸಲು ಜೋಶಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಸ್ಮಾರ್ಟ ಸಿಟಿ ಯೋಜನೆಯಡಿ ಅನೇಕ ನಗರಗಳ ಚಹರೆ ಬದಲಾಗಿದೆ. ಇದೇ ರೀತಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಹುಬ್ಬಳ್ಳಿ& ಅಂಕೋಲಾ ರೈಲು ಮಾರ್ಗ, ಧಾರವಾಡ& ಬೆಳಗಾವಿ ನೇರ ರೈಲು ಯೋಜನೆಗಳನ್ನು ಸಾಕಾರಗೊಳಿಸಬೇಕಿದೆ ಎಂದು ಡಾ. ಪ್ರಸಾದ ಹೇಳಿದ್ದಾರೆ.

ಧಾರವಾಡದಲ್ಲಿ ಪ್ರಲ್ಹಾದ ಜೋಶಿ, ಹಾವೇರಿ-೮ ಗದಗನಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಅವರು ಗೆಲುವು ಸಾಧಿಸಿರುವುದು ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿ ಎಂದು ಅವರು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net