ಜೋಳದಾಳು ಉಪವಲಯ ಅರಣ್ಯಾಧಿಕಾರಿ ಅಮಾನತು

Channagiri, Saguvani,
Published on

ಚನ್ನಗಿರಿ: ತಾಲೂಕಿನ ಜೋಳದಾಳು ಅರಣ್ಯ ಪ್ರದೇಶ ವ್ಯಾಪ್ತಿಯ ಕಲ್ಲಾಪುರ ಗ್ರಾಮ ಸಮೀಪದ ನವಿಲೆ ಬಸಲೆಯಲ್ಲಿ ಅಂದಾಜು 10 ಲಕ್ಷ ರೂ. ಮೌಲ್ಯದ 8 ಸಾಗುವಾನಿ ಮರ ಕಡಿದು ಸಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ವಲಯ ಅರಣ್ಯಾಧಿಕಾರಿ ಗಿರೀಶ್ ಅವರನ್ನು ಅಮಾನತು ಮಾಡಿ ಬುಧವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಆದೇಶ ಹೊರಡಿಸಿದ್ದಾರೆ.

ಕಳೆದ 20 ದಿನಗಳ ಹಿಂದೆಯೇ ಮರ ಕಡಿದು ಸಾಗಿಸಲಾಗಿದೆ ಎನ್ನಲಾಗಿದ್ದು, ಈ ವಿಚಾರ ಮೂರು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಅಲ್ಲದೆ, ಅಮ್ಮನಗುಡ್ಡದ ಅರಣ್ಯ ವ್ಯಾಪ್ತಿಯಲ್ಲಿ ಒಂದು ಸಾಗುವಾನಿ ಮರ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಜೋಳದಾಳುವಿನ ಅರಣ್ಯ ಇಲಾಖೆ ಡಿಪೋಗೆ ಸಾಗಿಸಿದ್ದರು. ಆದರೆ, ಈ ಮರ ಕೂಡ ನಾಪತ್ತೆ ಆಗಿದ್ದು, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಅನುಮಾನ ಮೂಡಿಸಿತ್ತು.

ಸಾಗುವಾನಿ ಮರಗಳನ್ನು ಉಪವಲಯ ಅರಣ್ಯಾಧಿಕಾರಿ ಗಿರೀಶ್ ಅವರು ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಮನೆ ಕಟ್ಟುವವರಿಗೆ ಮಾರಾಟ ಮಾಡಿದ್ದರು ಎಂದು ತನಿಖೆ ವೇಳೆ ತಿಳಿದುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಹೊಳೆಹೊನ್ನೂರು ಶಾಖೆ ಗುಡಮಗಟ್ಟೆ ಭಾಗದ ಸರ್ವೇ ನಂ. 43ರಲ್ಲಿ ಅರಣ್ಯ ಪ್ರದೇಶದ ಒತ್ತುವರಿಗೆ ಸಹಕರಿಸಿದ ಆರೋಪದ ಮೇಲೆ ಗಸ್ತು ಅರಣ್ಯ ಪಾಲಕ ರಾಮಪ್ಪ ದೊಡ್ಡಮನಿ ಎಂಬುವರನ್ನು ಈಚೆಗೆ ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಕಾಯುವ ಸಿಬ್ಬಂದಿಯಿಂದಲೇ ಮರಗಳ ಕಡಿತಲೆ ನಡೆಯುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net