

ಸಾಸ್ವೆಹಳ್ಳಿ: ಹೋಬಳಿಯ ಗ್ರಾಮೀಣ ಭಾಗಗಳಲ್ಲಿ ಜಾನಪದ ಸಂಸ್ಕೃತಿ ಹಿನ್ನೆಲೆ ಹೊಂದಿರುವ ಜೋಕುಮಾರ ಸ್ವಾಮಿ ಮೂರ್ತಿಯನ್ನು ಬುಟ್ಟಿಯಲ್ಲಿ ಹೊತ್ತ ಮಹಿಳೆಯರು ಎಲ್ಲೆಡೆ ಸಂಚರಿಸುತ್ತಿದ್ದಾರೆ.
ಗಣೇಶ ಹಬ್ಬ ಮುಕ್ತಾಯವಾಗುತ್ತಿದ್ದಂತೆಯೇ ಗ್ರಾಮೀಣ ಭಾಗಗಳಲ್ಲಿ ಗಂಗಾಮತಸ್ಥರ ಮನೆಯಲ್ಲಿ ಭಾದ್ರಪದ ಶುದ್ಧ ಸಪ್ತಮಿಯಂದು ಜೋಕುಮಾರಸ್ವಾಮಿ ಹುಟ್ಟಿ ಅಷ್ಟಮಿಯಿಂದ ಊರೂರು ಸುತ್ತುತ್ತಾನೆ. ಮಹಾಲಯ ಅಮಾವಾಸ್ಯೆವರೆಗೂ ಶುಭಕಾರ್ಯ ನಡೆಸುವುದಿಲ್ಲ.
ಕುಂಬಾರರ ಮನೆಯಲ್ಲಿ ಮಣ್ಣಿನಿಂದ ತಯಾರಿಸಿದ ಈ ಮೂರ್ತಿಯನ್ನು ಗಂಗಾಮತಸ್ಥ ಮಹಿಳೆಯರು ತಂದು ಬಿದಿರಿನ ಬುಟ್ಟಿಗೆ ಬೇವಿನ ಸೊಪ್ಪಿನ ಶೃಂಗಾರ ಮಾಡಿ ಬುಟ್ಟಿಯ ಮಧ್ಯಭಾಗದಲ್ಲಿ ಜೋಕುಮಾರಸ್ವಾಮಿ ಪ್ರತಿಷ್ಠಾಪಿಸುತ್ತಾರೆ.
ನಂತರ, ಮಹಿಳೆಯರು ಹೊತ್ತು ಸ್ವಾಸ್ವೆಹಳ್ಳಿ, ಬೆನಕನಹಳ್ಳಿ, ಹುಣಸಘಟ್ಟ, ಹಿರೇಬಾಸೂರು, ಉಜ್ಜನಿಪುರ, ಬೀರಗೊಂಡನಹಳ್ಳಿ, ರಾಂಪುರ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ ಮನೆಗಳಿಗೆ ತೆರಳಿ ಅವರು ನೀಡುವ ಜೋಳ, ಅಕ್ಕಿ, ಮೆಣಸಿನಕಾಯಿ, ಉಪ್ಪು, ತರಕಾರಿ, ಎಣ್ಣೆ, ಬೆಣ್ಣೆ ಮತ್ತಿತರ ಸಾಮಗ್ರಿ ಸಂಗ್ರಹಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅಳಲು ರೂಪದಲ್ಲಿ ಪ್ರಸಾದ ಕೊಡುವ ಸಂಪ್ರದಾಯವಿದೆ. ಜೋಕುಮಾರಸ್ವಾಮಿ ಆಚರಣೆಯಿಂದ ರೈತರ ಬದುಕು ಹಸನಾಗುತ್ತದೆ ಎಂಬ ನಂಬಿಕೆ ರೈತಾಪಿ ಕುಟುಂಬದಲ್ಲಿದೆ.
ಲೋಕ ಕಲ್ಯಾಣಕ್ಕಾಗಿ ಶ್ರಾವಣ ಮಾಸದಲ್ಲಿ ಗುರುಗಳ, ದಾಸಪ್ಪಗಳ, ಜೋಗಪ್ಪ-ಜೋಗತಿಯರ ಜೋಳಿಗೆ ಕಾಯಕ ನಡೆದಂತೆ, ಭಾದ್ರಪದ ಮಾಸದಲ್ಲಿ ನಮ್ಮ ಸಮಾಜದಿಂದ ಜೋಕುಮಾರನ ಕಾಯಕ ನಡೆದುಬಂದಿದೆ. ಇವೆಲ್ಲವೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಗಳು.
I ಹಾಲಮ್ಮ, ಗಂಗಮತಸ್ಥ ಹಿರಿಯ ಮಹಿಳೆ.