ಜಮೀನು ಸ್ವಾಧೀನಕ್ಕೆ ಜಂಟಿ ಸರ್ವೆ: ಬಿಡಿಎಯಿಂದ ರೈತರಿಗೆ ತಿಳಿವಳಿಕೆ ನೋಟಿಸ್

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಅಧಿಸೂಚನೆ ಹೊರಡಿಸಿದ್ದ ಜಮೀನಿನಲ್ಲಿ ಸರ್ಕಾರಕ್ಕೆ ಸೇರಿದ್ದ 77 ಎಕರೆ 35 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಜಂಟಿ ಸರ್ವೆ ನಡೆಸಲು ನಿರ್ಧರಿಸಲಾಗಿದೆ.

ಕೆಂಪೇಗೌಡ ಬಡಾವಣೆಯನ್ನು 4,043 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ 77 ಎಕರೆ 35 ಗುಂಟೆ ಸರ್ಕಾರಿ ಜಮೀನಿನಲ್ಲಿ ಹಲವು ಮಂದಿ ಸಾಗುವಳಿ ಮಾಡುತ್ತಿದ್ದಾರೆ. ಹಾಗಾಗಿ ಈವರೆಗೂ ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಈ ಹಿಂದೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆದಿದ್ದರೂ, ಸ್ವಾಧೀನ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇತ್ತೀಚಿಗೆ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದ 600 ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ಹಸಿರುನಿಶಾನೆ ದೊರೆತ ಬಳಿಕ ಸರ್ಕಾರಿ ಜಮೀನನ್ನೂ ಕೂಡ ಸ್ವಾಧೀನಕ್ಕೆ ಪಡೆಯಲು ಪ್ರಾಧಿಕಾರ ಮುಂದಾಗಿದೆ.

ಮುಂದಿನ ಮಂಗಳವಾರದಿಂದ (ಡಿ.10) ಮೂರು ದಿನ ಸರ್ವೆ ನಡೆಸಲು ದಿನ ನಿಗದಿ ಮಾಡಲಾಗಿದೆ. ಈ ವಿಷಯವನ್ನು ಸಾಗುವಳಿ ಮಾಡುತ್ತಿರುವ ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ರೈತರಿಗೆ ತಿಳಿವಳಿಕೆ ನೋಟಿಸ್ ರವಾನಿಸಲಾಗಿದೆ. ಜಂಟಿ ಸರ್ವೆ ವೇಳೆ ಸಾಗುವಳಿ ಜಮೀನಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ. ಸರ್ವೆ ಬಳಿಕ ಸಾಗುವಳಿ ಜಮೀನಿಗೆ ಪರಿಹಾರ ನಿಗದಿ ಕೂಡ ಮಾಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net