

ಮೈಸೂರು: ಹಸಿರು ಅರಣ್ಯೀಕರಣ ವಲಯದ ಒಂದೇ ಸರ್ವೇ ನಂಬರ್‌ನಲ್ಲಿ ಅರಣ್ಯ ಭೂಮಿ, ಕೃಷಿ ಹಾಗೂ ವಾಸಸ್ಥಾನ ಇರುವುದರಿಂದ ಅನೇಕ ತೊಂದರೆಗಳು ಎದುರಾಗುತ್ತಿದೆ. ಇದರಿಂದ ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ಗೊಂದಲ ಉಂಟಾಗುತ್ತಿದ್ದು, ಈ ಗೊಂದಲ ನಿವಾರಣೆಗೆ ಜಂಟಿ ಸರ್ವೇ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬಹುತೇಕ ಕಡೆಗಳಲ್ಲಿ ಕಂದಾಯ ಗ್ರಾಮ, ಅರಣ್ಯ ಭೂಮಿ ಹಾಗೂ ಖಾಸಗಿ ಭೂಮಿಗಳನ್ನು ವಿಂಗಡಿಸುವುದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ಅಂತಹ ಪ್ರದೇಶಗಳಲ್ಲಿ ಸರ್ವೇ ಮೂಲಕ ಕಂದಾಯ, ಅರಣ್ಯ ಹಾಗೂ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದರೆ ವಾರಸುದಾರರಿಗೆ ವಹಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರವಿಲ್ಲ
ಬಂಡೀಪುರ ಅರಣ್ಯ ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. ಬಂಡೀಪುರ ಅರಣ್ಯದೊಳಗೆ ಕೇರಳ, ತಮಿಳುನಾಡಿನ ಮಾರ್ಗದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದ್ದು ಅದು ಮುಂದುವರಿಯುತ್ತದೆ. ಬಂಡಿಪುರದಲ್ಲಿ ರೈಲು ಮಾರ್ಗ ಅಥವಾ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಸಮೀಕ್ಷೆ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅತ್ಯಗತ್ಯವಾಗಿದೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದೆ. ಹೀಗಾಗಿ, ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಅರಣ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದರು.
ಆನೆ ದಾಳಿ ಸಾವು ದುರ್ದೈವ: ಕರ್ನಾಟಕದ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಆನೆ ಕೇರಳದಲ್ಲಿ ದಾಳಿ ಮಾಡಿದ್ದರಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ದುರ್ದೈವದ ಸಂಗತಿಯಾಗಿದೆ. ಯಾವುದೇ ವನ್ಯಜೀವಿಯನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಆನೆಗಳು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ. ಆನೆ ಕಾರಿಡಾರ್ ಎಂದೇ ಇದಕ್ಕೆ ಕರೆಯಲಾಗುತ್ತದೆ. ಇದು ಕರ್ನಾಟಕದ ಆನೆ, ತಮಿಳುನಾಡು ಆನೆ, ಕೇರಳ ಆನೆ ಎಂದು ಬ್ರಾೃಂಡ್ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ಬೇಸಿಗೆಯಲ್ಲಿ ಕಾಳ್ಗಿಚ್ಚಿನಿಂದ ಅರಣ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅಗ್ನಿಶಾಮಕ ದಳದೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅರ್ಜುನ ಆನೆ ವರದಿ ಬಂದಿದೆ
ನಾಡಹಬ್ಬ ದಸರೆಯ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸಾವಿನ ತನಿಖೆ, ಮರಣೋತ್ತರ ಪರೀಕ್ಷೆ ನಡೆದು ವರದಿ ಕೈ ಸೇರಿದೆ. ವರದಿಯನ್ನು ಪರಿಶೀಲಿಸಲಾಗುತ್ತಿದ್ದು, ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಾನೂನು ಕ್ರಮ: ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ. ಅವರು ಸಹ ಹಸ್ತಕ್ಷೇಪ ಮಾಡುವುದು ಬೇಡ. ಅಂತಿಮವಾಗಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಲಿದೆ. ಹಾಗಾಗಿ ಸಂಸದರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
*ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಅಧಿಕೃತ ವರದಿ ಇದೆ. ಆದರೆ, ಇನ್ನೂ ಹೆಚ್ಚಿನ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಒತ್ತುವರಿಯ ನಿಖರ ಮಾಹಿತಿ ನೀಡುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದೇನೆ.
-ಸಚಿವ ಈಶ್ವರ ಖಂಡ್ರೆ