ಸರ್ಕಾರಿ, ಖಾಸಗಿ ಶಾಲೆಗಳ ಜಮೀನು ಜಂಟಿ ಸರ್ವೇ ಇಂದು

Published on

ಮೇಲುಕೋಟೆ: ಪಾಂಡವಪುರ ಜೆಎಂ.ಎಪ್.ಸಿ ನ್ಯಾಯಾಲಯದ ಆದೇಶದಂತೆ ಶತಮಾನದ ಇತಿಹಾಸವಿರುವ ಮೇಲುಕೋಟೆಯ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯ ಜಮೀನು ಹಾಗೂ ಯದುಶೈಲ ಎಜುಕೇಶನ್ ಸೊಸೈಟಿಗೆ ಸೇರಿದ ಜಮೀನುಗಳ ಜಂಟಿ ಸರ್ವೇ ಕಾರ್ಯ ಫೆ.19ರಂದು ನಡೆಯಲಿದೆ.

ಬಾಲಕರ ಶಾಲೆಯ ಜಮೀನಿನ ಆರ್‌ಟಿಸಿ, ಎಂಆರ್, ಸ್ಕೆಚ್‌ಕಾಪಿ, ಆಕಾರ್ ಬಂದು ಇದ್ದರೂ ಸರ್ಕಾರಿ ಶಾಲೆಯ ಜಮೀನಿನಲ್ಲಿ ಬೆಳೆದ ನೀಲಗಿರಿಮರಗಳನ್ನು ಶ್ರೀಯದುಶೈಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ.ಬಿ ನರಸಿಂಹೇಗೌಡ ಈ ಜಾಗ ನಮಗೆ ಸೇರಿದೆ ಎಂದು ಹೇಳುತ್ತಾ ಕಡಿದು ಸಾಗಿಸಿದ್ದರು. ಈ ಕ್ರಮಕ್ಕೆ ಸರ್ಕಾರಿ ಶಾಲಾ ಆಡಳಿತದಿಂದ ವಿರೋಧ ವ್ಯಕ್ತವಾಗಿತ್ತು. 2018ರಲ್ಲಿ ಶಾಲೆಗೆ ಬೇಸಿಗೆ ರಜೆ ಇದ್ದಾಗ ಯದುಶೈಲ ಎಜುಕೇಶನ್ ಸೊಸೈಟಿ ಮತ್ತೆ ಮರ ಕಡಿಯುತ್ತಿದ್ದಾಗ ಪ್ರತಿರೋಧ ವ್ಯಕ್ತಪಡಿಸಿದ್ದ ಮುಖ್ಯ ಶಿಕ್ಷಕರು, ಪೊಲೀಸರಿಗೆ ದೂರು ನೀಡಿದ್ದರು. ಆದರೂ ಯಾವುದೇ ಪ್ರಯೋಜವಾಗದೆ ಮರ ಕಡಿದು ಸಾಗಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಶಾಲಾ ಮೈದಾನದಲ್ಲಿ ಮರ ಕಡಿದ ಆರೋಪದಲ್ಲಿ ಯದುಶೈಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಮಾಹಿತಿ ನೀಡಿದೆ.

ಪಾಂಡವಪುರ ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ 280/2022ರಂತೆ ಮೊಕದ್ದಮೆ ದಾಖಲಿಸಿದ ಶ್ರೀಯದುಶೈಲ ಎಜುಕೇಶ್ ಸೊಸೈಟಿಯ ಕಾರ್ಯದರ್ಶಿ ಕೆ.ಬಿನರಸಿಂಹೇಗೌಡ, ಮರ ಕಡಿಯಲು ಅನುಮತಿ ನೀಡುವಂತೆ ಮಧ್ಯಂತರ ಮನವಿ ಸಲ್ಲಿಸಿದ್ದರು. ಸರ್ಕಾರಿ ಶಾಲೆಯ ಪರವಾಗಿ ಸರ್ಕಾರಿ ಅಭಿಯೋಜಕರ ವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಮರ ಕಡಿಯಲು ಅನುಮತಿ ನೀಡಲಿಲ್ಲ. ಬದಲಾಗಿ ಮೇಲುಕೋಟೆಯ ಸರ್ಕಾರಿ ಶಾಲೆಯ ಆಟದ ಮೈದಾನವಿರುವ ಜಮೀನು ಹಾಗೂ ಯದುಶೈಲ ಎಜುಕೇಶನ್ ಸೊಸೈಟಿಗೆ ಸೇರಿದ ಜಮೀನುಗಳ ಜಂಟಿ ಸರ್ವೇ ಮಾಡುವಂತೆ ಫೆ.19ರಂದು ದಿನಾಂಕ ನಿಗದಿಮಾಡಿ ಆದೇಶ ನೀಡಿದೆ.

ಸರ್ವೇ ಕಾರ್ಯದಲ್ಲಿ ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿ ಸರ್ಕಾರಿ ಶಾಲಾ ಆಸ್ತಿ ಉಳಿಸಲು ಸಹಕಾರ ನೀಡಬೇಕೆಂದು ಶಾಲಾಭಿವೃದ್ಧಿ ಸಮಿತಿ ಮನವಿ ಮಾಡಿದೆ. ಜಂಟಿ ಸರ್ವೇ ನಡೆದರೆ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದಿರುವ ನಾಗರಿಕರು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net