

ಬೆಂಗಳೂರು: ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್‌ಹುಡ್ ವಿಲ್ಲಾ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಶೀಘ್ರ ಪರ್ಯಾಯವಾಗಿ ಕೊಳವೆ ಅಳವಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಯಲಹಂಕ ವಲಯದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ನಲ್ಲಿ ಕಳೆದ ಶನಿವಾರ ಸುರಿದ ಮಳೆಯಿಂದಾಗಿ 22 ವಿಲ್ಲಾಗಳಿಗೆ ನೀರು ನುಗ್ಗಿ ಸಮಸ್ಯೆಯುಂಟಾಗಿದ್ದ ಸ್ಥಳಕ್ಕೆ ಪಾಲಿಕೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಲಿಕೆ ವತಿಯಿಂದ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಪುಟ್ಟೇನಹಳ್ಳಿ ಕರೆಯು ಅರಣ್ಯ ಇಲಾಖೆಗೆ ಬರಲಿದೆ. ಕೆರೆಯ ಪಕ್ಕದ ಪ್ರದೇಶದಲ್ಲಿ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದ್ದು, ಸೀವೇಜ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಾಜಕಾಲುವೆ ನಿರ್ಮಾಣ ಮಾಡಿ ಕೆರೆಗೆ ನೀರನ್ನು ಬಿಡಲು ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ 520 ಮೀ. ಉದ್ದದ 1,600 ಎಂ.ಎಂ ಪೈಪ್ ಲೈನ್ ಅನ್ನು ಕೆರೆಯ ವಾಯು ವಿಹಾರ ಮಾರ್ಗದ ಪಕ್ಕದಲ್ಲಿ ಮಾಡಿಕೊಂಡು ಮುಂದೆ ಬರುವ ರಾಜಕಾಲುವೆಗೆ ಸಂಪರ್ಕಿಸಲಾಗುವುದು ಎಂದರು.
ರಮಣಶ್ರೀ ಲೇಔಟ್‌ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಯಾವುದೇ ಮನೆಗಳು ಇಲ್ಲದ ಕಾರಣ ಅಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಇದೀಗ ಸದರಿ ಸ್ಥಳದಲ್ಲಿ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿರುವ ಕಾರಣ ಮಳೆನೀರು ನಿಲ್ಲುವಂತಾಗಿದೆ. ಸದರಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಪಂಪ್ ವ್ಯವಸ್ಥೆ ಮಾಡಿಕೊಂಡು ನೀರನ್ನು ಬೇರೆಡೆ ಬಿಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಾಲಿಕೆ ಕಾರ್ಯಕ್ಕೆ ಸಹಕಾರ:
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮಾತನಾಡಿ, ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಪಾಲಿಕೆಗೆ ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ವಲಯ ಆಯುಕ್ತ ಕರೀ ಗೌಡ, ಜಂಟಿ ಆಯುಕ್ತ ನಯೀಮ್ ಮೊಹ್ಮದ್ ಮೊಮಿನ್, ಕಾರ್ಯಪಾಲಕ ಅಭಿಯಂತರರಾದ ಸುಧಾಕರ್, ಸವಿತಾ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.