ಅವಿಭಕ್ತ ಕುಟುಂಬಗಳ ನೋಡುವುದೇ ಚೆಂದ

satyatma sri
ಚಾತುರ್ಮಾಸ್ಯ ಕಾಲದಲ್ಲಿ ಪ್ರತಿನಿತ್ಯ ಸಾವಿರಾರು ಜನರಿಗೆ ಅಡುಗೆ ಮಾಡಿ ಬಡಿಸಿದ ವೆಂಕಟಗಿರಿ ಮತ್ತು ವಿಜಯಕುಮಾರ್ ಅವರ ತಂಡವನ್ನು ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸನ್ಮಾನಿಸಿ ಆಶೀರ್ವದಿಸಿದರು.
Published on

ಶಿವಮೊಗ್ಗ: ಅವಿಭಕ್ತ ಕುಟುಂಬ ಪದ್ಧತಿ ಮತ್ತೆ ಕೌಟುಂಬಿಕ ವ್ಯವಸ್ಥೆಯಲ್ಲಿ ಬರಬೇಕಿದೆ. ಅವಿಭಕ್ತ ಕುಟುಂಬಗಳನ್ನು ನೋಡುವುದೇ ಒಂದು ಸಂತೋಷ. ಹೀಗೆ ಬದುಕುವುದೇ ಸೂಕ್ತ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಸಂಜೆ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿದರು.
ಈಗ ಕಾಲ ಬದಲಾಗಿದೆ. ಪ್ರಸ್ತುತ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಇರುವುದೇ ಅವಿಭಕ್ತ ಕುಟುಂಬ ಎನ್ನುವ ಘೋರವಾದ ಸ್ಥಿತಿ ಇದೆ. ಎಂತಹ ಕಷ್ಟ ಬಂದರೂ ಒಟ್ಟಿಗೆ ಬಾಳುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ನೂರಾರು ಜನರು ಒಂದೇ ಮನೆಯಲ್ಲಿ ಸುಖವಾಗಿ ಇರುತ್ತಿದ್ದ ನಮ್ಮ ಸಂಸ್ಕೃತಿಯಲ್ಲಿ ಇಂದು ಗಂಡ-ಹೆಂಡತಿಯ ನಡುವೆ ಸಾಮರಸ್ಯ ಕಡಿಮೆಯಾಗುತ್ತಿದೆ ಎನ್ನುವುದೇ ಅನರ್ಥ ಎಂದರು.
ಕಷ್ಟದಲ್ಲಿರುವಾಗ ಅಣ್ಣ-ತಮ್ಮಂದಿರು ಹೇಗೆ ಪರಸ್ಪರ ಸಹಾಯ ಮಾಡಬೇಕು ಎಂಬುದನ್ನು ಮಹಾಭಾರತ ನಮಗೆ ಕಲಿಸುತ್ತದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಪರಸ್ಪರ ಒಬ್ಬರಿಗೊಬ್ಬರು ಯಾರಿಗೂ ತಿಳಿಯದಂತೆಯೇ ಸಹಾಯ ಮಾಡಿಕೊಂಡಿದ್ದರು ಎಂದು ತಿಳಿಸಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ ಮುಂತಾದವರಿದ್ದರು.
ಇಂದು ಬೃಹತ್ ರಕ್ತದಾನ ಶಿಬಿರ: ಶ್ರೀ ಸತ್ಯಾತ್ಮ ತೀರ್ಥರ 28ನೇ ಚಾತುರ್ಮಾಸ್ಯದ ಅಂಗವಾಗಿ ಶಿವಮೊಗ್ಗ ರೋಟರಿ ರಕ್ತನಿಧಿ ಸಹಯೋಗದಲ್ಲಿ ಸೆ.23ರ ಬೆಳಗ್ಗೆ 9ಕ್ಕೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನ ಶಿಬಿರವನ್ನು ಸತ್ಮಾತ್ಮತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ರೋಟರಿ ವತಿಯಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು ಎಂದು ರೋಟರಿ ರಕ್ತನಿಧಿಯ ಪಿಆರ್‌ಒ ಎಚ್.ಕೆ.ಸತೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net