ಸಾವಯವ ಕೃಷಿಗೆ ಒತ್ತು ನೀಡಲು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜು ಸಲಹೆ

18
Published on

ಮೈಸೂರು: ತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ. ಹಾಗಾಗಿ ಈ ಬೆಳೆಯತ್ತಲೂ ರೈತರು ಗಮನ ಹರಿಸುವಂತೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜು ಸಲಹೆ ನೀಡಿದರು.

ಸುತ್ತೂರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಆಯೋಜಿಸಿದ್ದ ರೈತರ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ರೈತರು ಸಾವಯವ ಕೃಷಿಗೆ ಒತ್ತುಕೊಡಬೇಕು, ಭೂಮಿಗೆ ನೈಸರ್ಗಿಕ ಗೊಬ್ಬರ ನೀಡುವುದರಿಂದ ಉತ್ತಮ ಪೋಷಕಾಂಶಗಳು ಬೆಳೆೆಗೆ ದೊರೆಯುತ್ತವೆ ಎಂದರು.

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಮಣ್ಣು, ನೀರು ಪರೀಕ್ಷೆಗಳನ್ನು ಆಗಾಗ್ಗೆ ಮಾಡಿಸಬೇಕು. ಅಡಕೆ, ತೆಂಗು, ಮಾವು, ಬಾಳೆಯ ಜತೆಗೆ ಅಲಂಕಾರಿಕ ಹೂ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಸಿಗುತ್ತದೆ ಎಂದು ತಿಳಿಸಿದರು.

ಎಸ್‌ಬಿಐ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಎನ್. ನಾಗೇಶ್ ಅವರು ಕೃಷಿ ಚಟುವಟಿಕೆಗೆ ಸಂಬಂಧಿಸಿದ ಉತ್ತಮ ಮಾಹಿತಿಗಳು ಶಿಬಿರದಿಂದ ದೊರಕಿವೆ. ಬ್ಯಾಂಕ್‌ಗಳು ಕೃಷಿಗೆ ವಿಶೇಷ ಮಹತ್ವ ಕೊಟ್ಟು ಸಾಲ ಸೌಲಭ್ಯಗಳನ್ನು ಒದಗಿಸಿವೆ. ಹಾಗಾಗಿ ಅದನ್ನು ಬಳಸಿಕೊಂಡು ಕೃಷಿಗೆ ಯೋಗ್ಯವಾದ ಭೂಮಿಯನ್ನು ಪಾಳು ಬೀಳಿಸದೆ ವ್ಯವಸಾಯ ಮಾಡಬೇಕು. ರೈತರು ಬೆಳೆದ ಬೆಳೆಗಳನ್ನು ಸಾಧ್ಯವಾದಷ್ಟು ಸ್ವತಃ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.

ಸಹಜ ಸಮೃದ್ಧ ಸಂಸ್ಥೆ ಜಿ. ಕೃಷ್ಣಪ್ರಸಾದ್ ಮಾತನಾಡಿ, ಕೃಷಿಯ ಮೂಲ ಬೀಜ. ಆಯಾಯ ಭೌಗೋಳಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಭಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ದೇಶಿಯ ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಇಳುವರಿಯು ಬಿತ್ತನೆ ಬೀಜಗಳಿಂದ ಅಷ್ಟೇ ಅಲ್ಲದೆ ಅನುಸರಿಸುವ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ. ವಿಷಮುಕ್ತವಾದ ವ್ಯವಸಾಯ ಮಾಡಬೇಕು ಎಂದರು.

ಪ್ರಗತಿಪರ ರೈತ ಪಿ.ಶಿವಕುಮಾರಸ್ವಾಮಿ, ಬೇಸಾಯವು ಪ್ರಯೋಗಾತ್ಮಕವಾಗಿದ್ದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಉದ್ಯಮಶೀಲತೆ ಇರುವುದು ಬೇಸಾಯದಲ್ಲಿ ಜನರ ಅಗತ್ಯತೆ ಅರಿತು ಸೂಕ್ತ ಬೆಳೆಗಳನ್ನು ಬೆಳೆದು ಲಾಭ ಗಳಿಸಿ ರೈತರು ಸ್ವಾವಲಂಬಿಗಳಾಗಬೇಕು. ಇದಕ್ಕೆ ಮನಸ್ಥಿತಿ ಮತ್ತು ಆತ್ಮಸ್ಥೈರ್ಯ ಬಹಳ ಮುಖ್ಯ ಎಂದು ತಿಳಿಸಿದರು.

ಮೈಸೂರು ಆಕಾಶವಾಣಿಯ ಕಾರ್ಯನಿರ್ವಾಹಕ ಎನ್. ಕೇಶವಮೂರ್ತಿ ಮಾತನಾಡಿ, ಭಾರತೀಯ ಕೃಷಿಗೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಹಿಂದಿನ ಕಾಲದಲ್ಲಿ ಕೃಷಿಯೇ ನಮ್ಮ ಬದುಕಾಗಿತ್ತು. ಒಂದು ತುಂಡು ಜಮೀನಿನಲ್ಲಿ ಜೀವನ ಕಲ್ಪಿಸಿಕೊಳ್ಳುವುದು ಒಂದು ಕಲೆ. ಭಾರತೀಯರು ಆಚರಿಸುವ ಹಬ್ಬಗಳು ಮತ್ತು ಕೃಷಿ ಸಂಸ್ಕೃತಿಯ ನಡುವೆ ಸಂಬಂಧವಿದೆ. ಸಮುದಾಯಗಳನ್ನು ಒಟ್ಟುಗೂಡಿಸುವ ಶಕ್ತಿ ಇರುವುದು ಕೃಷಿಗೆ ಮಾತ್ರ ಎಂದು ಹೇಳಿದರು. ಶಿಬಿರಾರ್ಥಿಗಳಾದ ಸ್ವಾಮಿಲವಣ, ಎಚ್.ಆರ್. ಶಿವಮಾದು, ಎಂ.ಪಿ. ರಾಮಶೆಟ್ಟಿ, ಎಸ್.ಬಿ ಶೀತಲ, ಕೆ.ಎಸ್. ಪ್ರದೀಪ್ ಅವರು ಅನಿಸಿಕೆಗಳನ್ನು ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net