

ಕನಕಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಸೇನೆ ಅಥವಾ ಇತರೇ ಯೂನಿಫಾರ್ಮ್ ಸೇವೆಗೆ ಸೇರಲು ಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ವಸತಿ ಸಹಿತ ತರಬೇತಿ ನೀಡಲು ಕನಕಗಿರಿ ಹಾಗೂ ಕಲಬುರಗಿಯಲ್ಲಿ ಸೇನಾ ಪೂರ್ವ ಆಯ್ಕೆ ತರಬೇತಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ 50 ಲಕ್ಷ ರೂ. ಮೀಸಲಿಟ್ಟಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರದೀಪ ತಿಳಿಸಿದರು.
ಪಟ್ಟಣಕ್ಕೆ ಮಂಜೂರಾಗಿರುವ ಸೇನಾ ತರಬೇತಿ ಕೇಂದ್ರಕ್ಕೆ ಅವಶ್ಯವಾದ ಕಟ್ಟಡ, ಮೈದಾನ ಹಾಗೂ ಮೂಲ ಸೌಲಭ್ಯದ ವೀಕ್ಷಣೆಗಾಗಿ ಭಾನುವಾರ ಕಲಕೇರಿ ರಸ್ತೆಯಲ್ಲಿನ ಪಾಂಡುರಂಗ ದೇವಸ್ಥಾನದ ಸಮುದಾಯ ಭವನ (ಬಿಸಿಎಂ ಹಳೇ ಮುರಾರ್ಜಿ ಶಾಲೆ ) ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಪಾಲರ ಆದೇಶದ ಅನುಸಾರ ಮಂಜೂರಿಯಾಗಿರುವ ತರಬೇತಿ ಕೇಂದ್ರಗಳನ್ನು ವಿಧಾನ ಮಂಡಲ ಅಧಿವೇಶನ ಮುಕ್ತಾಯದ ಬಳಿಕ ಆರಂಭಿಸಲಾಗುವುದು.
ಮೂರು ವರ್ಷಗಳಿಂದ ಆರ್ಮಿ ಸೇವೆಗಳಿಗೆ ತೆರಳಲು ಬಯಸುವ ಯುವಕರಿಗೆ ರಾಜ್ಯದ ಉಡುಪಿ, ಮಂಗಳೂರು ಮತ್ತು ಕಾರವಾರದಲ್ಲಿ ಮಾರ್ಗದರ್ಶನ ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರಂತೆ ಉತ್ತರ ಕರ್ನಾಟಕದ ಯುವಕರು ಇತ್ತೀಚೆಗೆ ಸೇನೆಗೆ ಸೇರಲು ಬಯಸುತ್ತಿದ್ದಾರೆ. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕಕ್ಕೆ ಮಂಜೂರಿಯಾಗಿರುವ ಸೇನಾ ಪೂರ್ವ ತರಬೇತಿ ಕೇಂದ್ರಗಳನ್ನು ಕಲಬುರಗಿ ಮತ್ತು ಕನಕಗಿರಿಯಲ್ಲಿ ಆರಂಭಿಸಲು ನಿರ್ಧರಿಸಿ ಆದೇಶ ಹೊರಡಿಸಲಾಗಿದೆ.
ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ತಾತ್ಕಾಲಿಕ ಕಟ್ಟಡ ಹಾಗೂ ಶಾರೀರಕ, ಆಟೋಟಗಳ ತಾಲೀಮು ನಡೆಸಲು ವಿಶಾಲ ಮೈದಾನ ಗುರುತಿಸಲು ಮುಂದಾಗಿದ್ದೇವೆ. ಅಭ್ಯರ್ಥಿಗಳಿಗೆ ನಿವೃತ್ತ ಸೈನಿಕರಿಂದ ತರಬೇತಿ ನೀಡಲಾಗುವುದು, ಸೇನೆಯಲ್ಲಿರುವಂತೆ ಊಟ, ವಸತಿಯೂ ತರಬೇತಿ ಕೇಂದ್ರದಲ್ಲಿರಲಿದೆ. ವರ್ಷದಲ್ಲಿ 3 ಬ್ಯಾಚ್‌ನಲ್ಲಿ ತಲಾ ನೂರರಂತೆ ಒಟ್ಟು 300 ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಗುರಿಯಿದೆ ಎಂದರು.
ಶಾರೀರಕ, ಆಟೋಟಗಳಿಗೆ ಹಾಗೂ ದೇಹ ಸದೃಢತೆ ಕಲಿಕೇರಿ ರಸ್ತೆಯಲ್ಲಿನ ಗಂಗಾಧರ ಸಜ್ಜನ ಅವರಿಗೆ ಸೇರಿದ ಭೂಮಿಯನ್ನು ಪರಿಶೀಲಿಸಿದರು. ಇಲ್ಲಿಯ ನಿಸರ್ಗ, ವಾತಾವರಣ ಮೈದಾನಕ್ಕೆ ಹೇಳಿ ಮಾಡಿಸಿದಂತಿದ್ದು, ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಗಂಗಾವತಿಯ ತಾಲೂಕು ವಿಸ್ತರಣಾಧಿಕಾರಿ ಉಷಾ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಸಚಿವರ ಆಪ್ತ ಸಹಾಯಕ ವೆಂಕಟೇಶ್, ಪ್ರಮುಖರಾದ ಹೊನ್ನೂರುಸಾಬ, ಶರಣಪ್ಪ ಭತ್ತದ, ಅನಿಲ ಬಿಜ್ಜಳ, ರಾಜಸಾಬ ನಂದಾಪೂರ, ಅಂಬಾಜಿರಾವ್ ಬೊಂದಾಡೆ, ಅನಂತಪ್ಪ ಧಾಯಿಪುಲ್ಲೆ ಇತರರು ಇದ್ದರು.