ಕಾಂಗ್ರೆಸ್ ಸೇರುವುದು ಸುಳ್ಳು: ಮಾಜಿ ಸಂಸದ ಪ್ರತಾಪಸಿಂಹ

Prathap Simha
Published on

ಮೈಸೂರು: ನಾನು ಕಾಂಗ್ರೆಸ್ ಸೇರುತ್ತೇನೆ, ಸಿದ್ದರಾಮಯ್ಯ ಪರ ಸಾಫ್ಟ್ ಅಗಿದ್ದೇನೆ ಎನ್ನುವುದು ಸುಳ್ಳು. 11 ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ, ಧರ್ಮದ ವಿಚಾರವಾಗಿ ವಿರೋಧ ಮಾಡುತ್ತಾ ಬಂದಿದ್ದೇನೆ. ಅವರ ಜಾತಿವಾದದ ಬಗ್ಗೆ ವಿರೋಧ ಮಾಡಿದವನು ನಾನೊಬ್ಬನೇ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.

ಸಿದ್ದರಾಮಯ್ಯ ಅವರ ಕೆಲ ಪ್ರಯತ್ನಗಳನ್ನು ನಿಷ್ಪಲ ಮಾಡಿದ್ದೇನೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಅವರು ಮುಂದಾಗಿದ್ದರು. ಈ ವೇಳೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ 311 ಕೋಟಿ ರೂ. ಕೊಡಿಸಿ ಏರ್‌ಪೋರ್ಟ್‌ಗೆ ಹೆಸರಿಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿಸಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿಕೊಂಡು ರಾಜಕಾರಣಕ್ಕೆ ಬಂದವನು. ನನ್ನ ನಿಷ್ಠೆ ಹಾಗೂ ಬದ್ಧತೆ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ. ನಾನು ಕಡೆಯವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಕಾಂಗ್ರೆಸ್ ಹೋಗುವ ಅನಿವಾರ್ಯತೆ ಬಂದಿಲ್ಲ ಎಂದರು.

ಹೆಸರಿದ್ದರೆ ಬದಲಾವಣೆ ಬೇಡ:

ಕೆಆರ್‌ಎಸ್ ರಸ್ತೆಗೆ ದಾಖಲೆಗಳಲ್ಲಿ ಪ್ರಿನ್ಸಸ್ ರಸ್ತೆ ಎಂದು ಹೆಸರಿದ್ದರೆ ಸಿದ್ದರಾಮಯ್ಯ ಎಂದು ಹೆಸರು ಬದಲಾವಣೆ ಮಾಡುವುದು ಬೇಡ. ಆ ರಸ್ತೆಗೆ ಪ್ರಿನ್ಸಸ್ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಅನ್ನುವುದಾದರೆ ನನ್ನ ಗಮನಕ್ಕೆ ಬಂದಿರಲಿಲ್ಲ. ದಾಖಲೆಯಲ್ಲಿ ಆ ಹೆಸರು ಇದ್ದರೆ ಬದಲಾವಣೆ ಮಾಡುವುದು ಬೇಡ. ಇದಕ್ಕೆ ನನ್ನ ತಕರಾರು ಇಲ್ಲ ಎಂದರು.

ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡುವುದು ಬೇಡ ಎಂದು ಸ್ಥಳೀಯ ಶಾಸಕ ಹರೀಶ್‌ಗೌಡ ಅವರಲ್ಲಿ ನಾನೇ ಮನವಿ ಮಾಡುತ್ತೇನೆ. ಆ ರಸ್ತೆಗೆ ಯಾವುದೇ ಹೆಸರಿಲ್ಲ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಹೆಸರನ್ನ ಇಡಬಹುದು ಎಂದು ಹೇಳಿದ್ದೆ. ಈ ವಿವಾದವನ್ನು ಇಲ್ಲಿಗೆ ಮುಗಿಸೋಣ ಎಂದರು.

ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಹಾಗೆಯೇ ಜನಪ್ರತಿನಿಧಿಗಳ ಕೊಡುಗೆಯೂ ಇದೆ. ಆದರೆ ಇಟ್ಟಿರುವ ಹೆಸರನ್ನು ಬದಲಾಯಿಸುವ ದಾಷ್ಟೃ ನಮಗೆ ಬೇಡ. ಹೊಸ ಬಡಾವಣೆ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ಅರ್ಥಪೂರ್ಣ ಆಗುತ್ತದೆ ಎಂದು ಹೇಳಿದರು.

ಸಭ್ಯತೆಯ ಗೆರೆ ಮೀರಿದಂತಹ ಕೆಲವು ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರು ಹೇಳಿಕೆ ಕೊಟ್ಟಿದ್ದಾರೆ? ಅವರು ಯಾವ ಪಕ್ಷದಿಂದ ಬಂದಿದ್ದಾರೆ? ಸ್ಥ್ಥಾನಮಾನಗಳಿಗಾಗಿ ಯಾವೆಲ್ಲ ದಾರಿ ಹಿಡಿದಿದ್ದರು ಎಂಬುದು ಇಡೀ ಮೈಸೂರಿಗೆ ಗೊತ್ತಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಲಿ

ಮೈಸೂರು: ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಪ್ರತಿಮೆ ಹಾಕಲು ಬಿಡುತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ನಗರದ ಕಲಾಮಂದಿರದ ಬಳಿ ರೈಲ್ವೆ ಹಳಿ ಬಳಿ ಕೆಂಪೇಗೌಡ ಪ್ರತಿಮೆ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ 25 ಲಕ್ಷ ರೂ. ಖರ್ಚು ಮಾಡಿ ಪ್ರತಿಮೆಯನ್ನು ಕೆತ್ತಿಸಲಾಗಿದೆ. ಆದರೆ ಕೆಂಪೇಗೌಡರ ಪ್ರತಿಮೆ ಮಾಡುವುದಕ್ಕೆ ಸಿದ್ದರಾಮಯ್ಯ ತಡೆದಿದ್ದಾರೆ. ಇದು ಏನನ್ನು ತೋರುತ್ತದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ದೂರಿದರು.

ಸಿದ್ದರಾಮಯ್ಯ ಅವರಿಂದ ತೊಂದರೆ

ಸಿದ್ದರಾಮಯ್ಯ ಅವರಿಂದ ಹೆಚ್ಚು ತೊಂದರೆಗೆ ಒಳಗಾಗಿರುವ ರಾಜಕಾರಣಿ ನಾನು. ವಿಧಾನಸಭೆ ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ಎರಡು ಕೇಸ್ ಹಾಕಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 5 ಕೇಸ್ ಹಾಕಿಸಿದ್ದಾರೆ. ಮೂರು ತಿಂಗಳಲ್ಲಿ ಯಾವ ನಾಯಕನಿಗೂ 5 ಎಫ್‌ಐಆರ್ ಆಗಿಲ್ಲ.

ಪ್ರತಾಪಸಿಂಹ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net