ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಜತೆ ಸಾಥ್

9 smg 2
ಶಿವಮೊಗ್ಗದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನದಲ್ಲಿ ವೀರ ಯೋಧರನ್ನು ಕೆ.ಎಸ್.ಈಶ್ವರಪ್ಪ ಸನ್ಮಾನಿಸಿದರು.
Published on

ಶಿವಮೊಗ್ಗ: ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಲೋಕಸಭೆ ಚುನಾವಣೆ ಎಂಬುದು ಕೇವಲ ಚುನಾವಣೆ ಅಲ್ಲ. ದೇಶ ಉಳಿಸುವ ಕಾಯಕ. ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಕಾಂಗ್ರೆಸ್ ಸೋಲಿಸಬೇಕೆಂಬ ಉದ್ದೇಶದಿಂದ ಜೆಡಿಎಸ್ ಜತೆ ಸೇರಿ ಚುನಾವಣೆ ಎದುರಿಸುತ್ತೇವೆ. ಈ ಬಾರಿ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಬಾರಿ ಕಾಂಗ್ರೆಸ್ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಒಂದೂ ಸ್ಥಾನ ಪಡೆಯದಂತೆ ಕಾಂಗ್ರೆಸ್ ವಿರೋಧಿ ಮತಗಳನ್ನು ಕ್ರೋಡೀಕರಿಸಲಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ನಾಟಿ ಮಾಡಿರುವ ಬೆಳೆಯೂ ನೀರಿಲ್ಲದೆ ಒಣಗುತ್ತಿವೆ. ಆದರೂ ಬರ ಘೋಷಣೆ ಮಾಡದೆ ಕಾದು ನೋಡುವ ತಂತ್ರ ಅನುಸರಿಸಲಾಗುತ್ತದೆ. ಕೊನೆಯ ದಿನಗಳಲ್ಲಿ ಮಳೆ ಬಂದರೆ ಬರ ಘೋಷಣೆ ಮಾಡದೆ, ಪರಿಹಾರ ನೀಡದೆ ಇರಬಹುದೆಂಬ ಮನಸ್ಥಿತಿಯಲ್ಲಿ ಸರ್ಕಾರವಿದೆ. ರಾಜ್ಯದಲ್ಲಿ ಬರ ಆವರಿಸಿದ್ದರೂ ಯಾವ ಜಿಲ್ಲೆಯ ಉಸ್ತುವಾರಿ ಸಚಿವರೂ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರೈತರ ಆಹವಾಲು ಆಲಿಸುತ್ತಿಲ್ಲ. ಎಂದು ಟೀಕಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡಿ ಎಂದರೆ ಆತ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯಕ್ತಿಕ
ನೋವಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಸಚಿವರೇ ಹೇಳಿದ್ದಾರೆ. ಇದು ರೈತ ವಿರೋಧಿ ನೀತಿಯಾಗಿದೆ. ಈ ರೀತಿ ಹೇಳುವ ಸಚಿವರನ್ನು ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದರು. ಇಂಡಿಯಾ ಎಂಬುದು ವಿದೇಶಿ ಹೆಸರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net