

ನಾಯಕನಹಟ್ಟಿ: ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆಬೀಳುವ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನಾಯಕನಹಟ್ಟಿ ಹೋಬಳಿಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತರು ಒತ್ತಾಯಿಸಿದರು.
ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಪಟ್ಟಣದ ನಾಡ ಕಚೇರಿ ಉಪ ತಹಸೀಲ್ದಾರ್ ಬಿ.ಶಕುಂತಲಾ ಅವರಿಗೆ ಮನವಿಪತ್ರ ಸಲ್ಲಿಸಿ ಆಗ್ರಹಿಸಿದರು.
ನಾಯಕನಹಟ್ಟಿ ಹೋಬಳಿಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗಿದೆ. ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಕಳೆದ ಎರಡು ತಿಂಗಳಿನಿಂದ ಬಿತ್ತನೆ ಮಾಡಿದ್ದ ರಾಗಿ, ಜೋಳ, ಸಜ್ಜೆ, ಹತ್ತಿ, ಸೂರ್ಯಕಾಂತಿ, ಶೇಂಗಾ, ತೊಗರಿ ಸೇರಿ ಬಹುತೇಕ ಬೆಳೆ ಒಣಗುವ ಹಂತ ತಲುಪಿದೆ. ಸಾಲ ಮಾಡಿಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.
ಹೋಬಳಿಯಲ್ಲಿ ಯಾವುದೇ ನದಿಮೂಲಗಳಿಲ್ಲ. ಕೇವಲ ಮಳೆಯಾಶ್ರಿತವಾಗಿ ಕೃಷಿ ಜೀವನ ನಡೆಸುತ್ತಿದ್ದಾರೆ. ಜತೆಗೆ ಕೊಳವೆ ಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರಿನಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಮಧ್ಯೆ ಈಚೆಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಎಲ್ಲ ವಿಷಯಗಳಲ್ಲೂ ಕೃಷಿಕರು ನೋವು ಅನುಭವಿಸುತ್ತಿದ್ದಾರೆ ಎಂದರು.
ಜಾನುವಾರುಗಳು ಮತ್ತು ದೇವರೆತ್ತುಗಳಿಗೆ ಮೇವು ನೀರಿಲ್ಲದೆ ಸಾಯುವ ಸ್ಥಿತಿ ತಲುಪಿವೆ. ಸರ್ಕಾರಗಳು ನಗರ ಪ್ರದೇಶಗಳಲ್ಲಿ ಸ್ಮಾಟ್‌ಸಿಟಿ, ಮೇಗಾ ಇಟಿ ಎಂದು ಘೋಷಿಸಿ ಕೋಟ್ಯಂತರ ರೂ. ಅನುದಾನ ನೀಡಲಾಗಿತ್ತಿದ್ದು, ಕೃಷಿ ಕ್ಷೇತ್ರವನ್ನು ನಿರ್ಲಕ್ಷೃ ಮಾಡಲಾಗಿದೆ ಎಂದು ದೂರಿದರು.
ಕೂಡಲೇ ನಾಯಕನಹಟ್ಟಿ ಹೋಬಳಿಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಹಾಗೂ ಈ ಭಾಗಕ್ಕೆ ರೈತರ ಹಿತಕಾಯಲು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿಬೇಕು. ಗ್ರಾಮ ಪಂಚಾತಿಯಿಗೆ ಒಂದರಂತೆ ಗೋಶಾಲೆಗಳನ್ನು ತೆರೆಯಬೇಕು. ಬೆಳೆ ವಿಮೆ, ಪರಿಹಾರವನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕದ ಅಧ್ಯಕ್ಷ ಬಿ.ಟಿ.ಪ್ರಕಾಶ್, ತಾಲೂಕಾಧ್ಯಕ್ಷ ಎಂ.ಪಾಲಯ್ಯ, ಗ್ರಾಪಂ ಸದಸ್ಯ ಶಿವರಾಜ್, ಮುಖಂಡರಾದ ಮಹೇಶ್‌ಕುಮಾರ್, ಸಣ್ಣಪ್ಪ, ಹನುಮಣ್ಣ, ಮಹೇಶ್, ಓಬಣ್ಣ ಇದ್ದರು.