

ಗುಳೇದಗುಡ್ಡ: ಯೋಧರಿಗೆ ತಮ್ಮ ಪ್ರಾಣಕ್ಕಿಂತ ದೇಶ ಮುಖ್ಯ. ಕಾರ್ಗಿಲ್ ಯುದ್ಧದ ವೇಳೆ ನಮ್ಮ ಯೋಧರು ಸಾಹಸ, ಶೌರ್ಯಗಳಿಂದ ವೈರಿ ಸೈನಿಕರನ್ನು ಸದೆಬಡಿದು ವಿಜಯೋತ್ಸವ ಆಚರಿಸಿದರು ಎಂದು ಯೋಧ ಸಿದ್ದಲಿಂಗಪ್ಪ ದಂಡಿನ ಹೇಳಿದರು.
ಪಟ್ಟಣದ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭಾರತೀಯ ಸೈನ್ಯ ಸೇರಿ ದೇಶ ಸೇವೆ ಮಾಡಬೇಕು. ವೀರಯೋಧರಿಂದ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ ಎಂದರು.
ಯೋಧರಾದ ಪರಶುರಾಮ ಜಾಧವ, ನಾಮದೇವ ಭಜಂತ್ರಿ, ಸುರೇಶ ಮುಸಿಗೇರಿ ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ನಿಖಿಲ ಕಟ್ಟಿಮನಿ, ನಂದಾ ಪರಗಿ ಕಾರ್ಗಿಲ್ ವಿಜಯ ದಿವಸ ಕುರಿತು ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಗೂ ನೃತ್ಯಗಳು ನಡೆದವು.
ಶಾಲೆ ಚೇರ್ಮನ್ ಅಶೋಕ ಹೆಗಡಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ವಿಠ್ಠಲಸಾ ಕಾವಡೆ, ಅಮಾತೆಪ್ಪ ಕೊಪ್ಪಳ, ಕರವೇ ಅಧ್ಯಕ್ಷ ರವಿ ಅಂಗಡಿ, ಮುಖ್ಯಶಿಕ್ಷಕಿ ಜೆ.ಜೆ. ಲೋಬೋ, ವಿ.ಬಿ. ಹಳ್ಳೂರ, ಸುಜಾತ ಕರಡಿಗುಡ್ಡ, ವಿದ್ಯಾರ್ಥಿ ಪ್ರತಿನಿಧಿಗಳಾದ ವಿಶ್ವನಾಥ ಚೌಕಿಮಠ, ಅಪೂರ್ವ ಬೀಳಗಿ ಇತರರಿದ್ದರು.