ಕೆರೆಗಳ ಪುನಶ್ಚೇತನಕ್ಕೆ ಕೈ ಜೋಡಿಸಿ

7 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಭಾಗದ ಜನರ ಜೀವಾಳವಾದ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸಬೇಕು. ಅಲ್ಲಿನ ಜನರಿಗೆ, ಪಶು, ಪಕ್ಷಿಗಳಿಗೆ ಸದುಪಯೋಗವಾಗಲು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕೆರೆಗಳ ಪುನಶ್ಚೇತನಕ್ಕೆ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಹೇಳಿದರು.
ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕಿನ ಹಳೇ ತೇಗೂರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಗ್ರಾಮದ ಜೋಗಿ ಕೆರೆ ಪುನಶ್ಚೇತನ ಕಾಮಗಾರಿಯ ಭೂಮಿಪೂಜೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.
ಪಂಚಭೂತಗಳಲ್ಲಿ ಒಂದಾದ ಜೀವ ಜಲದ ಪ್ರತಿ ಹನಿಯೂ ಅಮೃತಕ್ಕೆ ಸಮಾನ. ಮೊದಲು ಬಾವಿಯಿಂದ ತೆಗೆದು ಕುಡಿಯುತ್ತಿರುವ ನೀರನ್ನು ಈಗ ಹಣ ನೀಡಿ ಬಾಟಲ್‌ಗಳಲ್ಲಿ ಕುಡಿಯುತ್ತಿದ್ದೇವೆ. ಇದೇ ರೀತಿ ಮನುಷ್ಯನ ದುರಾಸೆಗೆ ಪ್ರಕೃತಿ ಕೆರೆ-ಕಟ್ಟೆ ನಾಶವಾಗುತ್ತಿದ್ದು, ಮುಂದೊಂದು ದಿನ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುವ ಸ್ಥಿತಿ ಬರಬಹುದು. ಹೀಗಾಗಿ ರಾಜ್ಯದ ನೂರಾರು ಕೆರೆಗಳ ಪುನಶ್ಚೇತನ ನಡೆಸಲಾಗುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, ಡಾ. ಡಿ. ವೀರೇಂದ್ರ ಹೆಗಡೆ ಕೈಗೊಳ್ಳುವ ಎಲ್ಲ ಸಮಾಜಮುಖಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಎಲ್ಲರೂ ಸೇರಿ ಕೆರೆ ಸಂರಕ್ಷಣೆಗೆ ಪಣತೊಡಬೇಕು ಎಂದರು.
ಜೋಗಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಕಮತರ ಮಾತನಾಡಿ, ಗ್ರಾಮದ ಕೆರೆ ಹೂಳೆತ್ತಲು ಆಯ್ಕೆ ಮಾಡಿದ್ದರಿಂದ ರೈತರಿಗೆ ಫಲವತ್ತಾದ ಮಣ್ಣು ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗಲಿದೆ. ಈ ಕಾಮಗಾರಿಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬೆಳವಲದ, ಅಭಿವೃದ್ಧಿ ಅಧಿಕಾರಿ ನಾಗರತ್ನ ತಪೇಲಿ, ಯೋಜನಾಧಿಕಾರಿ ಮಯೂರ ತೋರಸ್ಕರ್, ಅಭಿಯಂತರ ನಿಂಗರಾಜ ಮಾಳವಾಡ, ಗ್ರಾಪಂ ಸದಸ್ಯರಾದ ಮಾರುತಿ ಬಂಡಿವಡ್ಡರ್, ಈರಯ್ಯ ಹಿರೇಮಠ, ಮಂಜುಳಾ ಜೋಗಿ, ಸಿದ್ದಲಿಂಗವ್ವ ಗುಡದರಿ, ಸ್ವ ಸಹಾಯ ಮತ್ತು ಪ್ರಗತಿ ಬಂಧು ಸಂಘಗಳ ಸದಸ್ಯರು, ಸೇವಾ ಪ್ರತಿನಿಧಿಗಳು, ಇತರರು ಇದ್ದರು.
ಶಿಲ್ಪಾ ಸ್ವಾಗತಿಸಿದರು. ರವಿ ಹೊಟ್ಟಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net