ಜಿಲ್ಲೆಯ ಸಾಂಸ್ಕೃತಿಕ ವೈಭವ ಮರು ಸೃಷ್ಟಿಗೆ ಕೈ ಜೋಡಿಸಿ

14 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಐತಿಹಾಸಿಕ ಜಿಲ್ಲೆ. ಜಿಲ್ಲೆಯ ಅನೇಕ ಮಹನೀಯರು ಧಾರವಾಡದ ಕೀರ್ತಿಯನ್ನು ರಾಷ್ಟ್ರ, ಅಂತಾರಾಷ್ಟ್ರ ಮಟ್ಟಕ್ಕೆ ಎತ್ತರಿಸಿದ್ದಾರೆ. ಕಲೆ, ಚಿತ್ರಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಮರು ಸೃಷ್ಟಿಸಲು ಎಲ್ಲರ ಸಹಕಾರ, ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ರಂಗಾಯಣದ ಸಮುಚ್ಚಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಟ್ರಸ್ಟ್​ಗಳ ಅಧ್ಯಕ್ಷರ ಹಾಗೂ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಮಲ್ಲಿಕಾರ್ಜುನ ಮನಸೂರ, ಡಾ. ದ.ರಾ.ಬೇಂದ್ರೆ, ಬಸವರಾಜ ರಾಜಗುರು, ಡಿ.ವಿ.ಹಾಲಬಾವಿ, ಡಾ. ಎಂ.ಎಂ. ಕಲಬುರ್ಗಿ ಅವರಂತಹ ಮಹನೀಯರು ಧಾರವಾಡದ ಹೆಸರನ್ನು ಚಿರಾಸ್ಥಾಯಿ ಆಗಿಸಿದ್ದಾರೆ. ಟ್ರಸ್ಟ್​ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಸಮಾಜಕ್ಕೆ ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರವನ್ನು ವಿಸ್ತರಿಸೋಣ ಎಂದರು.

ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್​, ಸಂತ ಶಿಶುನಾಳ ಶರೀಫರು, ಡಾ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಸವಾಯಿ ಗಂಧರ್ವರ ಸಂಗೀತೋತ್ಸವ ಹೆಸರಿನಲ್ಲಿ ಅವಳಿ ನಗರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಟ್ರಸ್ಟ್​ಗಳ ಸಹಕಾರದಲ್ಲಿ ಆಯೋಜಿಸೋಣ. ರಂಗಾಯಣದಿಂದ ಟ್ರಸ್ಟ್​ಗಳ ಸಹಕಾರದಲ್ಲಿ ಮಕ್ಕಳಿಗೆ ಸಾಹಿತ್ಯ, ಸಂಗೀತ, ಕಲೆ ಪ್ರೋತ್ಸಾಹಿಸುವ ಬೇಸಿಗೆ ಶಿಬಿರ ಮಾಡಲು ಕ್ರಿಯಾಯೋಜನೆ ಸಲ್ಲಿಸಲು ರಂಗಾಯಣ ಆಡಳಿತಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಅನೇಕರು ವ್ಯಕ್ತಪಡಿಸಿದ ಧಾರವಾಡ ಉತ್ಸವ ಆಯೋಜನೆ, ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನ ಪುನರಾರಂಭ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಟ್ರಸ್ಟ್​ಗಳ ಸಾಹಿತ್ಯ, ಸಂಗೀತ, ಚಿತ್ರಕಲೆ ವಿಸ್ತರಿಸಬೇಕು. ಯುವ ಸಮೂಹ ಹೆಚ್ಚು ಭಾಗವಹಿಸುವಂತೆ ಕ್ರಿಯಾಯೋಜನೆ ರೂಪಿಸಬೇಕು. ಸರ್ಕಾರದ ಸಹಾಯ ಧನದ ಜತೆಗೆ ಸ್ವಂತ ಆದಾಯವನ್ನು ವಿವಿಧ ಶಿಬಿರ, ಪ್ರದರ್ಶನಗಳ ಮೂಲಕ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಟ್ರಸ್ಟ್​ನಲ್ಲಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಬಸವರಾಜ ರಾಜಗುರು ಟ್ರಸ್ಟ್​ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ, ಇತರರು ಮಾತನಾಡಿದರು. ವಿವಿಧ ಟ್ರಸ್ಟ್​ಗಳ ಪದಾಧಿಕಾರಿಗಳಾದ ಪಂ. ಎಂ. ವೆಂಕಟೇಶಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಡಾ.ಬಿ.ಮಾರುತಿ, ಪಾರ್ವತಿ ಹಾಲಭಾವಿ, ಶಂಕರ ಕುಂಬಿ, ನಿಜಗುಣ ರಾಜಗುರು, ಡಾ. ವೀರಣ್ಣ ರಾಜೂರ, ಡಾ. ಜಿ.ಎಂ.ಹೆಗಡೆ, ಡಾ. ಶಶಿಧರ ತೋಡಕರ, ಡಾ.ಡಿ.ಎಂ.ಹಿರೇಮಠ, ದೀಪಕ ಆಲೂರು, ಭಾರತಿದೇವಿ ರಾಜಗುರು, ನೀಲಮ್ಮ ಕೊಡ್ಲಿ, ಬಾಳಣ್ಣ ಶೀಗಿಹಳ್ಳಿ, ಸುರೇಶ ಹಾಲಭಾವಿ, ಇತರರು ಇದ್ದರು.

ಟ್ರಸ್ಟ್​ಗಳಿಗೆ ಭೇಟಿ: ಸಭೆಗೂ ಪೂರ್ವದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಡಾ. ಮಲ್ಲಿಕಾರ್ಜುನ ಮನಸೂರ ಟ್ರಸ್ಟ್​, ಡಾ.ದ.ರಾ.ಬೇಂದ್ರೆ ಮನೆ ಮತ್ತು ಟ್ರಸ್ಟ್​ ಕಚೇರಿ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್​ ಮನೆ, ಬಸವರಾಜ ರಾಜಗುರು ಮನೆ, ಡಿ.ವಿ. ಹಾಲಭಾವಿ ಮನೆ ಹಾಗೂ ಟ್ರಸ್ಟ್​ ಕಚೇರಿಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಂದ, ಟ್ರಸ್ಟ್​ಗಳಿಂದ ಮಾಹಿತಿ ಪಡೆದರು.

ಶಶಿಕಲಾ ಹುಡೇದ ಸ್ವಾಗತಿಸಿದರು. ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net