ಮಾನವ ಕಳ್ಳಸಾಗಣೆ ತಡೆಗೆ ಕೈಜೋಡಿಸಿ

30 CRP-1A
ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣ ಕುಮಾರಿ ಹಾಗೂ ಡಿವೈಎಸ್ಪಿ ಎನ್.ಕುಮಾರ್ ಉದ್ಘಾಟಿಸಿದರು. ಕೆ.ಪಿ.ಶರತ್, ಡಿ.ಕೆ. ಹರೀಶ್, ಸಿ.ಬಿ.ಹೇಮಂತ್ ಕುಮಾರ್, ಸಂಜಯ್ ಕುಮಾರ್, ಸಿದ್ದರಾಮ ನಾಯಕ, ಸುರೇಶ್ ಇದ್ದರು.
Published on

ಚನ್ನರಾಯಪಟ್ಟಣ: ಮಾನವ ಕಳ್ಳಸಾಗಣೆ ಒಂದು ಗಂಭೀರ ಸಮಸ್ಯೆಯಾಗಿದ್ದು, ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚನ್ನರಾಯಪಟ್ಟಣ ಡಿವೈಎಸ್ಪಿ ಎನ್.ಕುಮಾರ್ ಎನ್.ಕುಮಾರ್ ಮನವಿ ಮಾಡಿದರು.

ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘ, ನವೋದಯ ವಿದ್ಯಾಸಂಸ್ಥೆ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಮಾನವ ಕಳ್ಳ ಸಾಗಣೆಕೆ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಮಿಷಗಳಿಗೆ ಒಳಗಾಗಿ, ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾದಾಗ ಮಾನವ ಸಾಗಾಣಿಕೆ ತಡೆಯಬಹುದು. ಅಮಾಯಕ ಹೆಣ್ಣು ಮಕ್ಕಳು, ಮಾನವ ಕಳ್ಳ ಸಾಗಾಣಿಕೆದಾರರಿಗೆ ಬಲಿಯಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ಸಣ್ಣ ಮಕ್ಕಳನ್ನು ಅಪಹರಿಸಿ ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆಗೆ ಹಚ್ಚುವುದು, ಮಾನವ ಅಂಗಾಂಗಗಳ ಮಾರಾಟವೂ ಕೇಳಿಬರುತ್ತಿವೆ. ಪ್ರಜ್ಞಾವಂತ ಸಮುದಾಯ, ವಿಶೇಷವಾಗಿ ಪಾಲಕರು ಬಹು ಎಚ್ಚರಿಕೆಯಿಂದ ಮಾನವ ಕಳ್ಳ ಸಾಗಣೆ ತಡೆಗೆ ಸಂಕಲ್ಪ ತೊಡಬೇಕು ಎಂದರು.

ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಣೆಗೆ ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಅದರಲ್ಲೂ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಂಗಸರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಇದೊಂದು ಸುವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಗಳು ಆಸೆ-ಆಮಿಷಗಳನ್ನು ಒಡ್ಡಿ ನಂಬಿಸಿ ವಂಚಿಸುವ ಸಾಧ್ಯತೆ ಇರುತ್ತದೆ. ಕಾನೂನು ವ್ಯವಸ್ಥೆಯೊಂದಿಗೆ ನಮ್ಮಲ್ಲಿ ಸಮನ್ವಯತೆ ಇದ್ದಲ್ಲಿ ಇಂತಹ ಅಪರಾಧಗಳನ್ನು ಕಡಿಮೆ ಮಾಡಬಹುದು. ಇಂತಹ ಕೃತ್ಯಗಳ ಬಗ್ಗೆ ನಮಗೆ ಅರಿವಿಗೆ ಬಂದಲ್ಲಿ ಪೊಲೀಸ್ ಇಲಾಖೆಗೆ ಸುಳಿವು ನೀಡುವ ಮೂಲಕ ನಮ್ಮ ಕರ್ತವ್ಯ ಪಾಲನೆ ಮಾಡಿದಲ್ಲಿ ಶೋಷಿತರಾಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಕುಮಾರಿ ಮಾತನಾಡಿ, ಅಪ್ರಾಪ್ತರು, ಮಹಿಳೆಯರು, ಯುವಜನರನ್ನು ಸಹ ಮಾನವ ಕಳ್ಳಸಾಗಾಣಿಕೆ ಸಮಸ್ಯೆಗೆ ತಳ್ಳುತ್ತಿದೆ. ಮಹಿಳೆಯರು, ಮಕ್ಕಳು ದುರ್ಬಲ ವರ್ಗದವರಾಗಿದ್ದು, ಅವರು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾದ್ಯತೆ ಇದ್ದು, ಅವರನ್ನು ರಕ್ಷಿಸುವುದು ಅವಶ್ಯಕವಾಗಿದೆ. ಮಾನವ ಕಳ್ಳಸಾಗಣೆ ಮಾಡುವವರಿಗೆ 7 ವರ್ಷದಿಂದ ಜೀವಿತಾವಧಿಯವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಕಾನೂನಿನ ಮೂಲಕವೇ ಈ ಜಾಲ ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘ-ಸಂಸ್ಥೆಗಳು ಮತ್ತು ಸೇವಾ ಮನೋಭಾವ ಹೊಂದಿದ ಜನರ ಬೆಂಬಲದ ಅಗತ್ಯವಿದೆ. ಮಾನವ ಕಳ್ಳಸಾಗಣೆ ತಡೆಯಲು, ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಈ ಅಪರಾಧದ ಬಗ್ಗೆ ಇತರರಿಗೆ ಅರಿವು ಮೂಡಿಸಬೇಕು. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾನವ ಕಳ್ಳಸಾಗಣೆಯನ್ನು ನೀವು ಗಮನಿಸಿದರೆ, ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.

ನವೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ ಶರತ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಹರೀಶ್ ಮಾತನಾಡಿದರು. ಉಪಾಧ್ಯಕ್ಷ ಸಿ.ಬಿ.ಹೇಮಂತ್ ಕುಮಾರ್, ವೃತ್ತ ನಿರೀಕ್ಷಕ ಎಸ್.ಎಂ.ರಘುಪತಿ, ನವೋದಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಎ.ಟಿ.ಸಂಜಯ್ ಕುಮಾರ್, ಮುಖ್ಯ ಶಿಕ್ಷಕರಾದ ಸಿದ್ದರಾಮ ನಾಯಕ, ಸುರೇಶ್, ನಿರ್ದೇಶಕ ಆನಂದ್ ಕಾಳೆನಹಳ್ಳಿ, ನ್ಯಾಯಾಂಗ ಇಲಾಖೆಯ ಭಗವಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net