

ದೊಡ್ಡಬಳ್ಳಾಪುರ : ಬಾಲ್ಯವಿವಾಹವು ಸಾಕಷ್ಟು ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಬಚ್ ಪನ್ ಬಚಾವೋ ಆಂದೋಲನದ ರಾಜ್ಯ ಸಮನ್ವಯಾಧಿಕಾರಿ ಬಿನು ವರ್ಗೀಸ್ ತಿಳಿಸಿದರು.
ಬಚ್ಪನ್ ಬಚಾವೋ ಆಂದೋಲನ, ರಾಜ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಭರಿತ ಟ್ರಸ್ಟ್ ವತಿಯಿಂದ ಶುಕ್ರವಾರ ತಾಲೂಕಿನ ವಿವಿಧೆಡೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಆಂದೋಲನದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು. ಶಾಲೆಗೆ ಹಾಜರಾದ ಮಕ್ಕಳಲ್ಲಿ ಯಾರೂ ಶಾಲೆ ಬಿಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕು. ಎಲ್ಲ ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ತಮ್ಮ ಗ್ರಾಮಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112ಗೆ ಮಾಹಿತಿ ನೀಡಬೇಕು. ಈ ಮೂಲಕ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಅಗತ್ಯ ಕ್ರಮವಹಿಸಬೇಕು ಎಂದರು.
ಬಾಲ್ಯ ವಿವಾಹದ ಅಪಾಯದ ಬಗ್ಗೆ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿಶೇಷಚೇತನ ಮಕ್ಕಳು ಸೇರಿ ಎಲ್ಲ ಗಂಡು ಮಕ್ಕಳಿಗೆ 21 ವರ್ಷ ಹಾಗೂ ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವವರೆಗೆ ವಿವಾಹ ಮಾಡಬಾರದು ಹಾಗೂ ಅಪ್ರಾಪ್ತ ಮಕ್ಕಳು ಮನೆಯಲ್ಲಿಯೇ ಅತಿ ಹೆಚ್ಚಾಗಿ ಶೋಷಣೆಗೆ ಒಳಗಾಗುವ ಸಾಧ್ಯತೆಯಿದ್ದು, ಇದನ್ನು ಪೋಷಕರು ಸೂಕ್ಷ್ಮತೆಯಿಂದ ನಿಗಾ ವಹಿಸಬೇಕು. - ಎನ್.ಎಂ.ಜಗದೀಶ, ಜಿಲ್ಲಾ ವಿಕಲಚೇತನರ ಕಲ್ಯಾಣಾಕಾರಿ
ದೀಪ ಬೆಳಗುವ ಮೂಲಕ ಜಾಗೃತಿ ಬಾಲ್ಯ ವಿವಾಹ ಮುಕ್ತ ಭಾರತ ಆಂದೋಲನವನ್ನು ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಹಾಗೂ ಎಳ್ಳುಪುರ ಗ್ರಾಮದಲ್ಲಿ ಆಯೋಜಿಸಿ ಬಾಲ್ಯ ವಿವಾಹದ ಕುರಿತು ಅರಿವು ಹಾಗೂ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ದೀಪ ಬೆಳಗುವ ಮೂಲಕ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಬಾಲ್ಯ ವಿವಾಹದ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಾಯಿತು.