ರನ್ನ ಉತ್ಸವ ಯಶಸ್ಸಿಗೆ ಕೈಜೋಡಿಸಿ

Join hands to make Ranna Utsav a success
ಮುಧೋಳ ನಗರದ ಡಾ,ಅಂಬೇಡರ್ ಹಾಗೂ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರನ್ನ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಮಹದೇವ ಸನಮುರಿ ಇದ್ದಾರೆ.
Published on

ಮುಧೋಳ: ರನ್ನ ಉತ್ಸವದ ತಯಾರಿಗೆ ಸಮಯ ಕಡಿಮೆ ಇದ್ದು, ಕೆಲಸಗಳು ಬೆಟ್ಟದಷ್ಟಿವೆ. ಆದ್ದರಿಂದ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಉತ್ಸವ ಯಶಸ್ಸಿಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು. ನಗರದ ಡಾ. ಅಂಬೇಡರ್ ಹಾಗೂ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಜ .22ರಿಂದ ಮೂರು ದಿನಗಳ ಕಾಲ ಜರುಗಲಿರುವ ರನ್ನ ಉತ್ಸವದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಸಭೆ ನಡೆಸಿ, ಅಧೀನ ಅಧಿಕಾರಿ ವರ್ಗದ ಪಾಲ್ಗೊಳ್ಳುವಿಕೆ ಬಗ್ಗೆ ಗಮನಹರಿಸಬೇಕು. ಜತೆಗೆ ಪ್ರಚಾರ ಕಾರ್ಯವೂ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು. ಇದರೊಟ್ಟಿಗೆ ಚಾಲುಕ್ಯ ಉತ್ಸವ ಹಮ್ಮಿಕೊಂಡರೆ ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಹಾಗೂ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಉದ್ದೇಶವಿದ್ದು, ಮಾರ್ಚ್ ತಿಂಗಳ ಬಜೆಟ್ ಕಾರಣ ಮುಖ್ಯಮಂತ್ರಿಗಳು ಬರುವ ಸಾಧ್ಯಾಸಾಧ್ಯತೆ ಬಗ್ಗೆ ತಿಳಿಸಲಾಗುವುದು ಎಂದರು. ತುಕಾರಾಮ ಹಂಚಾಟೆ ಮಾತನಾಡಿ, ಸ್ಮರಣ ಸಂಚಿಕೆಯಲ್ಲಿ ಜಾಹೀರಾತಿಗೆ ಅವಕಾಶ ನೀಡಬಾರದು. ಆ ಗ್ರಂಥದಲ್ಲಿ ರನ್ನನ ಪದ್ಯ ಹಾಗೂ ಗದ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ರನ್ನ ಕೃತಿಗಳ ಮೆರವಣಿಗೆಯಾಗಬೇಕು ಎಂಬ ಮಾತುಗಳು ಕೇಳಿಬಂದವು.ಸಾಹಿತಿ ಚಂದ್ರಶೇಖರ ದೇಸಾಯಿ ಮಾತನಾಡಿ, ಮೈಸೂರು ಹಾಗೂ ಹಂಪಿ ಉತ್ಸವಕ್ಕಿಂತ ಅದ್ದೂರಿಯಾಗಿ ಕಳೆದ ರನ್ನ ಉತ್ಸವ ತಮ್ಮ ಆಡಳಿತಾವಧಿಯಲ್ಲಿ ನಡೆದಿದೆ. ಈ ಬಾರಿಯೂ ಅದೇ ಮಾದರಿಯಲ್ಲಿ ಉತ್ಸವ ಜರುಗಬೇಕು. ರನ್ನಹಳಗನ್ನಡ ಪ್ರಶಸ್ತಿಯನ್ನು ಹಳಗನ್ನಡದಲ್ಲಿ ಪಾಂಡಿತ್ಯ ಸಾಧಿಸಿದವರಿಗೆ ನೀಡಬೇಕು ಎಂದು ಸಲಹೆ ನೀಡಿದರು. ರನ್ನ ಪ್ರತಿಷ್ಠಾನದ ಸದಸ್ಯೆ ಸುಲೋಚನಾ ಜವಳಗಿ, ಡಾ.ಶಿವಾನಂದ ಕುಬುಸದ, ಡಾ.ಸತೀಶ ಮಲಘಾಣ, ಡಾ. ಕೆ.ಎಲ್. ಉದುಪುಡಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಸಂಶೋಧಕ ಸಂಗಮೇಶ ಕಲ್ಯಾಣಿ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಕರ್ಣಕುಮಾರ ಜೈನ್, ತಹಸೀಲ್ದಾರ್ ಮಹಾದೇವ ಸಣಮುರಿ, ತಾಪಂ ಇಒ ಉಮೇಶ ಸಿದ್ದಾಳ ಮತ್ತಿತರರಿದ್ದರು. ಉತ್ಸವದ ಯಶಸ್ಸಿಗಾಗಿ 15 ಸಮಿತಿಗಳನ್ನು ರಚಿಸಲಾಗಿದೆ. ರನ್ನರಥ ಮೆರವಣಿಗೆಗಾಗಿ ತಾತ್ಕಾಲಿಕವಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ರಂಗಾಯಣದಿಂದ ರನ್ನ ಕವ್ಯಾಧಾರಿತ ನಾಟಕ ಪ್ರದರ್ಶನಗೊಳ್ಳಲಿದೆ. ಸಂಗೀತ ಮತ್ತು ನಾಟಕ ಅಕಾಡೆಮಿಗೆ ಸಂಗೀತ ಪ್ರದರ್ಶನ ನೀಡಲು ಕೋರಲಾಗಿದೆ. 2018ರ ವೈಭವದ ಆಧಾರದ ಮೇಲೆ ಕೆಲವು ಯೋಜನೆ ರೂಪಿಸಲಾಗಿದೆ. ಜಾನಕಿ ಕೆ.ಎಂ., ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net