ಬಳ್ಳಾರಿ : ಯುವ ಪೀಳಿಗೆಯು ಎಚ್‌ಐವಿ ಸೋಂಕು ಬಗೆಗಿನ ಜಾಗೃತಿ ಹೊಂದಬೇಕು ಎಂದು ಜಿಲ್ಲಾ ಸರ್ಜನ್ ಡಾ.ಎನ್. ಬಸರೆಡ್ಡಿ ಹೇಳಿದರು.
ನಗರದ ಶ್ರೀಮೇಧಾ ಪದವಿ ಕಾಲೇಜು ಆವರಣದಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಸಹಯೋಗದೊಂದಿಗೆ ಎಚ್‌ಐವಿ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರ ಅಂದೋಲನ ಅಂಗವಾಗಿ ಗುರುವಾರ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಎಚ್‌ಐವಿ ಸೋಂಕು, ಅದರ ಕಳಂಕ ತಾರತಮ್ಯ ಮತ್ತು ಅದರಿಂದ ಉಂಟಾಗುವ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಎಲ್ಲರೂ ಶ್ರಮಿಸಬೇಕಿದೆ. ಯುವಜನತೆಯು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕಾಧಿಕಾರಿ ಡಾ.ಇಂದ್ರಾಣಿ ಮಾತನಾಡಿ, ಎಚ್‌ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆ, ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ ಈ ಸೋಂಕು ಹರಡುತ್ತದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎಚ್‌ಐವಿ ಸೋಂಕು ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸುವ ಮೂಲಕ ಜಾಗರೂಕರಾಗಬೇಕಿದೆ ಎಂದರು.
ಆ.12 ಅಂತರಾಷ್ಟ್ರೀಯ ಯುವ ದಿನಾಚರಣೆ ಮತ್ತು ಎಚ್‌ಐವಿ ಸೋಂಕಿನ ಜಾಗೃತಿ ಕುರಿತು ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 121 ಯುನಿಟ್ ರಕ್ತ ಸಂಗ್ರಹಿಸಿಲಾಗಿದೆ. ಇದೇ ವೇಳೆ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ವಿತರಿಸಲಾಯಿತು.
ಶ್ರೀಮೇಧಾ ಕಾಲೇಜು ಆವರಣದಿಂದ ಆರಂಭಗೊಂಡ ಬೈಕ್ ರ‌್ಯಾಲಿಯೂ ಎಸ್ಪಿ ವೃತ್ತ, ಕುಮಾರ ಸ್ವಾಮಿ ದೇವಸ್ಥಾನ, ಸುಧಾಕ್ರಾಸ್ ಮೂಲಕ ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಮರಳಿ ಕಾಲೇಜ್ ಆವರಣಕ್ಕೆ ಬಂದು ಅಂತ್ಯಗೊಂಡಿತು.