

ಚಿಕ್ಕಬಳ್ಳಾಪುರ: ಎಚ್‌ಐವಿ ಸೋಂಕಿನ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬುಧವಾರ ಕೈಗೊಂಡಿದ್ದ ಏಡ್ಸ್ ಜಾಗೃತಿ ಜಾಥಾಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಎಚ್‌ಐವಿ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಸಮಾಜ ನಿರ್ಲಕ್ಷೃದಿಂದ ನೋಡುತ್ತದೆ. ಇದರಿಂದ ಸೋಂಕಿತರು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ವರದಿಯಾಗುತ್ತಿದ್ದು ಇಂತಹ ಮನೋಭಾವನೆ ದೂರ ಮಾಡುವುದರ ಜತೆಗೆ ಎಚ್‌ಐವಿ ಹರಡುವಿಕೆ ತಡೆಗಟ್ಟಬೇಕು, ಸೋಂಕಿತರನ್ನು ಸಮಾನತೆಯಿಂದ ಕಾಣಬೇಕು ಎಂದು ಹೇಳಿದರು.
ಎಚ್‌ಐವಿ ಒಂದು ಮಾರಣಾಂತಿಕ, ಗುಣವಾಗದ ಕಾಯಿಲೆ ಎಂಬ ಕುಖ್ಯಾತಿ ಪಡೆದಿದೆ, ಯಾವುದೇ ನಿಖರವಾದ ಔಷಧ, ಚಿಕಿತ್ಸೆ ಇಲ್ಲ. ಈ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸೆಯ ಸಂಶೋಧನಾ ಅಧ್ಯಯನ ಇನ್ನೂ ನಡೆಯುತ್ತಿದೆ. ಸೋಂಕಿತರ ಪ್ರಮಾಣದಲ್ಲಿ ದೇಶದಲ್ಲೇ ಕರ್ನಾಟಕ 16ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಪ್ರಕರಣಗಳನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಏಡ್ಸ್ ಬಗ್ಗೆ ಜನರಲ್ಲಿನ ತಪ್ಪು ಕಲ್ಪನೆ ದೂರವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಇಂದಿರಾ ಆರ್ ಕಬಾಡೆ ಆಶಿಸಿದರು. ಜಿಲ್ಲಾ ಶಸ ಚಿಕಿತ್ಸಕ ಡಾ.ರುದ್ರಮೂರ್ತಿ, ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿರ್ಮೂಲನಾಧಿಕಾರಿ ಯಲ್ಲಾ ರಮೇಶ್ ಬಾಬು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಹರೀಶ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ ಇದ್ದರು.