

ಹನಗೋಡು: ವಿದ್ಯಾರ್ಥಿಗಳು ಯಾವ ದುಶ್ಚಟಗಳಿಗೂ ಬಲಿಯಾಗದೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ ತಿಳಿಸಿದರು.
ಹನಗೋಡು ಹೋಬಳಿಯ ತಟ್ಟೆಕೆರೆ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜತೆಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಯಾವ ದುಶ್ಚಟಗಳಿಗೂ ಬಲಿಯಾಗದೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ತಾಲೂಕು ಯೋಜನಾಧಿಕಾರಿ ನಾರಾಯಣಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ವಿದ್ಯಾರ್ಥಿ ವೇತನ, ಶಿಕ್ಷಕರ ನೇಮಕ ಸೇರಿದಂತೆ ಹಲವು ಕೊಡುಗೆಗಳನ್ನು ನೀಡುತ್ತಿದೆ. ಅಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಮುಖ್ಯವಾಗಿ ಶಿಸ್ತು, ಶ್ರದ್ಧೆ ಸಂಯಮದಂತಹ ಉತ್ತಮ ಗುಣಗಳನ್ನು ರೂಢಿಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಿ ಉನ್ನತ ಮಟ್ಟಕ್ಕೇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ಸಮಿತಿ ಸದಸ್ಯರಾದ ದಾ.ರಾ.ಮಹೇಶ್, ನೇರಳಕುಪ್ಪೆ ಮಹದೇವ್ , ಶಾಲಾ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣ್, ಸಹಶಿಕ್ಷಕ ಪುಟ್ಟೇಗೌಡ, ಒಕ್ಕೂಟ ಅಧ್ಯಕ್ಷ ಸುರೇಶ್, ಕರಣಕುಪ್ಪೆ ವಲಯದ ಮೇಲ್ವಿಚಾರಕಿ ಶೋಭಾ, ಸೇವಾಪ್ರತಿನಿಧಿ ಸುಂದ್ರಮ್ಮ ಇತರರು ಇದ್ದರು.