ನಶೆಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ

Drug free Awarness
ಕೋಲಾರ ತಾಲೂಕು ನಾಯಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ನಶಮುಕ್ತ ಭಾರತ ಹಾಗೂ ಹಿರಿಯ ನಾಗರಿಕರ ಸಂರಕ್ಷಣೆ ಕಾನೂನು, ಮಕ್ಕಳ ಕಾನೂನುಗಳ ಕುರಿತು ಅರಿವು ನೀಡುವ ಕಾರ್ಯಕ್ರಮಕ್ಕೆ ಗಿಡ ನೆಟ್ಟು ಹಿರಿಯ ಸಿವಿಲ್ ನ್ಯಾಯಾಧೀಶ ಸನೀಲ್ ಎಸ್.ಹೊಸಮನಿ ಚಾಲನೆ ನೀಡಿದರು. ಅಂಗವಿಕಲ ಕಲ್ಯಾಣಾಧೀಕಾರಿ ಎಂ.ರಮ್ಯಾ, ಯೋಜನಾಧಿಕಾರಿ ಸಿ.ಎಚ್.ಹರೀಶ್, ಹಿರಿಯ ನಾಗರಿಕರ ಸಹಾಯವಾಣಿಯ ದಿವ್ಯಜ್ಯೋತಿ, ಶಿಕ್ಷಕರಾದ ಲೋಕೇಶ್, ಸತೀಶ್ ಇದ್ದರು.
Published on

ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್.ಹೊಸಮನಿಕರೆ

ಕೋಲಾರ: ಯುವಕರು ಮತ್ತು ವಿದ್ಯಾರ್ಥಿಗಳು ಧೂಮಪಾನ, ಗುಟ್ಖಾ, ತಂಬಾಕು, ಗಾಂಜಾ, ಮದ್ಯ, ಹೆರೆನ್, ಕೊಕಾ ಮುಂತಾದ ಮಾದಕ ವಸ್ತುಗಳನ್ನು ಬಳಸುವ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹಾಗೂ ನಶೆಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್.ಹೊಸಮನಿ ಹೇಳಿದರು.

ತಾಲೂಕಿನ ನಾಯಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿವ್ಯಜ್ಯೋತಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಎಸ್ಪಿ ಕಚೇರಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಶಮುಕ್ತ ಭಾರತ ಹಾಗೂ ಹಿರಿಯ ನಾಗರಿಕರ ಸಂರಕ್ಷಣೆ ಕಾನೂನು, ಮಕ್ಕಳ ಕಾನೂನುಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳಿಗೆ ಸಹಾಯವಾಣಿ 1090 ಅಥವಾ 14567 ಕ್ಕೆ ಸಂಪರ್ಕಿಸಿ ಸಲಹೆ ಪಡೆಯಲು ಅವಕಾಶವಿದೆ ಎಂದರು.

ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು. ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶ ನೀಡುವಂತಾಗಬೇಕು ಎಂದರು.

ಮಾದಕ ವಸ್ತುಗಳ ಬಳಕೆ, ಸಾಗಣೆ, ಮಾರಾಟ ಕಾನೂನು ಬಾಹಿರವಾಗಿದ್ದು, ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಇದಕ್ಕೆ ಅವಕಾಶ ಕಲ್ಪಿಸದಂತೆ ಕೋಟ್ಟಾ ಕಾಯ್ದೆಯ 2003ರ ಕಾನೂನುಗಳನ್ನು ಪಾಲಿಸಬೇಕು ಎಂದರು.

ಹಣದ ಆಸೆಗಾಗಿ ರೈತರು ಸಹ ಗಾಂಜಾ ಬೆಳೆದು ಅಪರಾಧಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಿದ್ಯಾವಂತರು ಸಹ ಒತ್ತಡಗಳಿಂದ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಜೀವನ ಪರ್ಯಂತ ಮಾದಕ ವಸ್ತುಗಳ ಚಟದ ದಾಸರಾಗಿ ಕೊನೆಗೆ ಕ್ಯಾನ್ಸರ್ ಮುಂತಾದ ರೋಗಗಳಲ್ಲಿ ನರಳಾಡುವ ಮೂಲಕ ಅಂತ್ಯ ಕಾಣುವಂತಾಗುತ್ತಾರೆ ಎಂದು ವಿಷಾಧಿಸಿದರು.

ಶಾಲೆಯ ಮುಖ್ಯಶಿಕ್ಷಕಿ ಯಶೋಧಮ್ಮ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನೀವು ಇಲ್ಲಿ ಬದುಕು ರೂಪಿಸಿಕೊಳ್ಳುವ ಆಲೋಚನೆ ಮಾಡಿ, ಶ್ರಮವಹಿಸಿ ಓದಿ ಅದು ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net