

ಬಳ್ಳಾರಿ: ಸ್ವಚ್ಛ, ಸದೃಢ ಹಾಗೂ ಡ್ರಗ್ಸ್‌ಮುಕ್ತ ಬಳ್ಳಾರಿ ನಿರ್ಮಾಣಕ್ಕೆ ಯುವಕರು, ಸಾರ್ವಜನಿಕರು ಕೈಜೋಡಿಸಬೇಕಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಹೇಳಿದರು.
ನಗರದ ಡಾರಾಜ್‌ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಪಂ ಸಂಯುಕ್ತಾಶ್ರಯದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಸಾಗಾಣಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಯು ಮಾದಕ ವಸ್ತುಗಳಿಂದ ದೂರವಿರಬೇಕು. ತಂದೆ-ತಾಯಿಯಂದಿರ ಆಶಾಭಾವನೆಗಳನ್ನು ಈಡೇರಿಸಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.
ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಮಾತನಾಡಿ, ಇಂದಿನ ಜಗತ್ತಿನಲ್ಲಿ ಮಾದಕದ್ರವ್ಯ ಸೇವನೆಯು ಬಹುದೊಡ್ಡ ವ್ಯಸನಿಯಾಗಿ ಪರಿಣಮಿಸಿದ್ದು, ಅವುಗಳಿಂದ ಯುವ ಪೀಳಿಗೆಯು ದೂರವಿರಬೇಕು. ಈ ನಿಟ್ಟಿನಲ್ಲಿ ಯುವಕ-ಯುವತಿಯರು ಯಾವುದೇ ಮಾದಕದ್ರವ್ಯ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂಬ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಯುವಕ ಮತ್ತು ಯುವತಿಯರು ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಸಾಗಾಣಿಕೆ ಕುರಿತು ಅರಿವು ಮೂಡಿಸಲು ಈ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಅದರಿಂದ ಎಲ್ಲರಲ್ಲಿಯೂ ಅರಿವು ಮತ್ತು ಜಾಗೃತಿ ಮೂಡಬೇಕಿದೆ ಎಂದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮ್ಯಾರಥಾನ್ ಜಿಲ್ಲಾ ಪೊಲೀಸ್ ಕಚೇರಿ ಆವರಣದಿಂದ ಆರಂಭವಾಗಿ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಎಸ್.ಪಿ ವೃತ್ತ, ಅಂಬೇಡ್ಕರ್ ವೃತ್ತ, ಎಚ್.ಆರ್.ಗವಿಯಪ್ಪ ವೃತ್ತ, ವಾಡ್ರ್ಲಾ ಕಾಲೇಜು ರಸ್ತೆ, ಕಾಳಮ್ಮ ವೃತ್ತ, ಗಡಿಗಿ ಚನ್ನಪ್ಪ ವೃತ್ತ ಮೂಲಕ ಡಾ.ರಾಜ್‌ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನಕ್ಕೆ ತಲುಪಿತು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಸುಮಾರು 1300 ರಿಂದ 1400 ಯುವಕ ಯುವತಿಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ವಿಎಸ್‌ಕೆ ವಿವಿ ಕುಲಸಚಿವ ಎಸ್.ಎನ್.ರುದ್ರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ನವೀನ್‌ಕುಮಾರ್ ಸೇರಿದಂತೆ ಡಿಎಸ್‌ಪಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಚನ್ನಬಸವ, ಪವಿತ್ರಾ ಪ್ರಥಮ ಸ್ಥಾನ
ಪುರುಷ ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಆರ್‌ಎಸ್‌ಎಸ್ ಕಾಲೇಜಿನ ವಿದ್ಯಾರ್ಥಿ ಚನ್ನಬಸವ (ಪ್ರಥಮ), ವಾಡ್ರ್ಲಾ ಕಾಲೇಜಿನ ವಿದ್ಯಾರ್ಥಿ ತಿಪ್ಪೇಶ್ ಯಾದವ್ (ದ್ವಿತೀಯ), ಎಸ್.ಎಸ್.ಎ ಕಾಲೇಜಿನ ವಿದ್ಯಾರ್ಥಿ ಚಂದನ್ (ತೃತೀಯ).ಮಹಿಳೆಯರ ವಿಭಾಗದಲ್ಲಿ ವಾಡ್ರ್ಲಾ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ ಬೀಳಗಿ (ಪ್ರಥಮ), ಅದೇ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾಜಿ.ಎಲ್ (ದ್ವಿತೀಯ), ಜೀನಿಯಸ್ ಶಾಲೆಯ ವಿದ್ಯಾರ್ಥಿನಿ ಹಾರಿಕಾ ಸಾಯಿ (ತೃತೀಯ) ಸ್ಥಾನ ಪಡೆದರು. ಇದೇ ವೇಳೆ ವಿಜೇತರಿಗೆ ಆಕರ್ಷಕ ನಗದು ಬಹುಮಾನ, ಕಪ್ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.