

ಸಾಗರ: ಅಸಮತೋಲನಗೊಳ್ಳುತ್ತಿರುವ ಪರಿಸರವನ್ನು ಸಮತೋಲನದತ್ತ ತೆಗೆದುಕೊಂಡು ಹೋಗಲು ಎಲ್ಲರ ಪರಿಶ್ರಮ ಅಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಲಿಂಗನಮಕ್ಕಿ ತಿಳಿಸಿದರು.
ತಾಲೂಕಿನ ಯಲಕುಂದ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗುರುಗುಂಡಿ ಕೆಂಪನಾಯ್ಕ ಅವರ 150ನೇ ಜನ್ಮದಿನದ ಅಂಗವಾಗಿ ಮನೆಗೆರಡು ಗಿಡ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು ಸಾಧ್ಯ. ಆಧುನಿಕ ಕಾಲಘಟ್ಟದಲ್ಲಿ ಬೇರೆಬೇರೆ ಉದ್ದೇಶಗಳಿಗೆ ಅಪಾರ ಪ್ರಮಾಣದಲ್ಲಿ ಕಾಡು ನಾಶ ಮಾಡುತ್ತಿದ್ದೇವೆ. ನಾಶ ಮಾಡಿದ ಅರಣ್ಯವನ್ನು ಮರು ನಿರ್ಮಾಣ ಮಾಡಲು ಎಲ್ಲರು ಸಂಕಲ್ಪ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಮುತ್ತಜ್ಜ ಕೆಂಪನಾಯ್ಕ ಅವರ 150ನೇ ಜನ್ಮ ದಿನಾಚರಣೆಯಲ್ಲಿ ಮನೆಗೆ ಎರಡು ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಮಾರು 400 ಔಷಽÃಯ ಗಿಡವನ್ನು ವಿದ್ಯಾರ್ಥಿಗಳಿಗೆ ನೀಡಿ ಅದನ್ನು ನೆಟ್ಟು ಬೆಳೆಸಲು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಜಿ.ಬಿ.ಕೆರೆಯಪ್ಪ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಬೇಕು. ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಸರ್ಕಾರಿ ಶಾಲೆಯಲ್ಲಿ ಮಾತ್ರ ಸಿಗಲು ಸಾಧ್ಯ. ಮಕ್ಕಳು ಅಂಕಾಧಾರಿತ ಶಿಕ್ಷಣದ ಬದಲು ಮೌಲ್ಯಾಧಾರಿತ ಶಿಕ್ಷಣ ಪಡೆಯುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಕೊಲ್ಸೆ, ವೇದಿಕೆಯಲ್ಲಿ ವೈ.ಕೆ.ಶ್ರೀಧರ ಮೂರ್ತಿ, ವೈ.ಕೆ.ದೇವೇಂದ್ರಪ್ಪ, ಮಂಜಪ್ಪ, ಜಯಂತ್, ವೆಂಕಟೇಶ್ ಇತರರಿದ್ದರು.