

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಅ.15 ರಿಂದ 24ರವರೆಗೆ ಹಮ್ಮಿಕೊಂಡಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ದೇವರಭೂಪುರ ಬೃಹನ್ಮಠದ ಗಜದಂಡ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಆಧ್ಯಾತ್ಮಿಕ ತಳಹದಿಯ ಮೇಲೆ ಸಾತ್ವಿಕ ಸತ್ವಶೀಲ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಮುಂಚೆ 1970 ಮತ್ತು 1998ರಲ್ಲಿ ರಂಭಾಪುರ ಶ್ರೀಗಳ ಸಾನ್ನಿಧ್ಯದಲ್ಲಿ ದಸರಾ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಲಿಂಗಸುಗೂರಿನಲ್ಲಿ ಹಮ್ಮಿಕೊಂಡಿರುವ ಸಮ್ಮೇಳನ ಮೂರನೇಯದಾಗಿದ್ದು, ಎಲ್ಲ ಜಾತಿ, ಜನಾಂಗದ ಜನರನ್ನು ಒಗ್ಗೂಡಿಸಿಕೊಂಡು ಸಮ್ಮೇಳನ ನಡೆಸಲಾಗುತ್ತಿದೆ.
ಅ.14ರಂದು ಸಂಜೆ ಆಗಮಿಸುವ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಅ.15 ರಿಂದ 24ರವರೆಗೆ ಪ್ರತಿದಿನ ಬೆಳಗ್ಗೆ ಈಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಠಲಿಂಗ ಪೂಜೆ ನೆರವೇರಲಿದೆ. ಪ್ರತಿನಿತ್ಯ ಸಂಜೆ 7ಕ್ಕೆ ಧರ್ಮ ಸಭೆ ನಡೆಯಲಿದೆ.
ಅ.15ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ವಿವಿಧ ಸಚಿವರು ಹಾಗೂ ಜನಪ್ರತಿನಿಗಳು ಧರ್ಮಸಭೆಯಲ್ಲಿ ನಿಗದಿತ ದಿನಾಂಕಗಳಂದು ಪಾಲ್ಗೊಳ್ಳಲಿದ್ದಾರೆ.
ಜತೆಗೆ ವಿದ್ವಾಂಸರಿಂದ ವಿಶೇಷ ಉಪನ್ಯಾಸ, ರಾಜ್ಯದ ವಿವಿಧ ಭಾಗಗಳಿಂದ ಶಿವಾಚಾರ್ಯರು, ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಅ.24ರಂದು ಮಧ್ಯಾಹ್ನ 3ಕ್ಕೆ ಜಗದ್ಗುರುಗಳ ಸೀಮೋಲ್ಲಂಘನ ಕಾರ್ಯಕ್ರಮ ಜರುಗಲಿದೆ ಎಂದು ಗಜದಂಡ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ಮುಖಂಡರಾದ ನಾಗನಗೌಡ ಹರವಿ, ಸಿದ್ಧನಗೌಡ ಸಾನಬಾಳ, ಅಶೋಕ ಪಾಟೀಲ್, ವಿರುಪನಗೌಡ ಬಂಡಿ ಉಪಸ್ಥಿತರಿದ್ದರು.