

ರಟ್ಟಿಹಳ್ಳಿ: ಭಾರತ ಆರ್ಥಿಕವಾಗಿ, ಶೈಕ್ಷಣಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದುತ್ತಿದೆ. ದೇಶದ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಜಾರಿಯಾದ ಜ. 26ರ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಆ. 15ರ ಸ್ವಾತಂತ್ರ್ಯೋತ್ಸವ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ದೇಶವು ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡುವುದರ ಮೂಲಕ ಅನೇಕ ರಾಷ್ಟ್ರಗಳಿಗೆ ಬೆಳೆಗಳನ್ನು ರಪ್ತು ಮಾಡುತ್ತಿದೆ. ದೇಶದಲ್ಲಿ ನೆಲೆಸಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರ ಹೀಗೆ ಅನೇಕ ಸಮಸ್ಯೆಗಳಿಂದ ನಾವು ವಿಮುಕ್ತರಾಗಬೇಕಾಗಿದೆ ಎಂದರು.
ತಹಸೀಲ್ದಾರ್ ಗುರುಬಸವರಾಜ ಕೆ. ಧ್ವಜಾರೋಹಣ ನೆರವೇರಿಸಿದರು. ಬಿಇಒ ಶ್ರೀಧರ್ ಎನ್., ಅಕ್ಷರ ದಾಸೋಹ ನಿರ್ದೇಶಕ ಕೆ.ಎಚ್. ಮಾರತೆಪ್ಪ, ಶಿಕ್ಷಣ ಸಂಯೋಜಕ ಎನ್.ವಿ. ನಾಯಕ, ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್‌ಐ ಜಗದೀಶ ಜಿ., ಎಸ್‌ಡಿಎಂಸಿ ಅಧ್ಯಕ್ಷರಾದ ವಿಜಯ ಅಂಗಡಿ, ಸಿದ್ದಪ್ಪ ಹರಿಜನ, ಜಿ.ಪಂ. ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ರವೀಂದ್ರ ಮುದಿಯಪ್ಪನವರ, ನಾಗನಗೌಡ ಕೋಣ್ತಿ, ಪರಮೇಶಪ್ಪ ಕಟ್ಟೇಕಾರ, ರಿಯಾಜ್ ನರಗುಂದಕರ, ಇರ್ಫಾನ್ ಜಡದಿ, ಉಪಸ್ಥಿತರಿದ್ದರು.