

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿಪ್ರ ಸೌಹಾರ್ದ ಸಹಕಾರಿ ಸಂಘ ನಿಯಮಿತದ 16ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಬುಧವಾರ ಜರುಗಿತು.
ಸೌಹಾರ್ದದ ಅಧ್ಯಕ್ಷ ಮಾಧವ ಶೂರಪಾಲಿ ಸಭೆ ಉದ್ಘಾಟಿಸಿ ಮಾತನಾಡಿ, ಹೆಚ್ಚಿನ ಜನರು ಸಂಘದ ಸದಸ್ಯತ್ವ ಪಡೆದರೆ ಆರ್ಥಿಕವಾಗಿ ಇನ್ನಷ್ಟು ಬಲಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವ್ಯವಹಾರ ನಡೆಸಲು ಎಲ್ಲ ಸದಸ್ಯರ ಸಹಕಾರ ಅಗತ್ಯ. ಎಲ್ಲರೂ ಕೈ ಜೋಡಿಸಿ ಸಂಘವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸೌಹಾರ್ದದ ಬೆಳವಣಿಗೆಯಲ್ಲಿ ಗಣನೀಯ ಪಾತ್ರ ವಹಿಸಿದ ಹಿರಿಯ ಸದಸ್ಯರಾದ ಹರ್ಷ ಡಂಬಳ, ಎನ್.ಜಿ. ಗಲಗಲಿ, ದತ್ತಾತ್ರೇಯ ಗೋಡಖಿಂಡಿ, ಪ್ರಭಾಕರ ಕುಲಕರ್ಣಿ, ವೆಂಕಟೇಶ ಸಿಂಗಟಗೇರಿ, ವಿಷ್ಣು ದೇಶಪಾಂಡೆ, ರಮಾಕಾಂತ ಜೋಶಿ ಅವರಿಗೆ ಸನ್ಮಾನಿಸಲಾಯಿತು.
ಹಿಂದಿನ ವರ್ಷದ ನಡಾವಳಿಗಳನ್ನು ನಿರ್ದೇಶಕ ಮಾಧವ ಧಾರವಾಡಕರ, ವಾರ್ಷಿಕ ವರದಿಯನ್ನು ಉಪಾಧ್ಯಕ್ಷ ಆನಂದ ಸಬನೀಸ, ಲೆಕ್ಕ ಪರಿಶೋಧನೆ ವರದಿಯನ್ನು ನಿರ್ದೇಶಕ ನವೀನ ಕೊರ್ಲಹಳ್ಳಿ ಪ್ರಸ್ತುತಪಡಿಸಿದರು. ಲಾಭಾಂಶ ಹಂಚಿಕೆ ಹಾಗೂ ಲೆಕ್ಕ ಪರಿಶೋಧಕರ ನೇಮಕ ಕುರಿತು ನಿರ್ದೇಶಕ ವಿನಾಯಕ ಜೋಶಿ ಸಭೆಗೆ ವಿವರಿಸಿ, 2023-24ನೇ ಸಾಲಿಗೆ ಸದಸ್ಯರಿಗೆ ಶೇ. 7.5 ಡಿವಿಡೆಂಡ್ ವಿತರಿಸಲು ಸಭೆ ಅನುಮೋದನೆ ಕೇಳಿದರು. ಇದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ನವೀನ ಶಾಸ್ತ್ರಿ ಪುರಾಣಿಕ, ನಿರ್ದೇಶಕಿ ಶೋಭಾ ದೇಶಪಾಂಡೆ, ಇತರರು ಇದ್ದರು. ರಾಜೀವ್ ಪಾಟೀಲಕುಲಕರ್ಣಿ ಸ್ವಾಗತಿಸಿದರು. ಅರವಿಂದ ಕಟ್ಟಿ ನಿರೂಪಿಸಿದರು.